ಮಡಿಕೇರಿ ಜ.21 : ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ ನಾಲ್ವರು ಮಾಜಿ ಸೈನಿಕರಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ನಡೆದ “ಆರ್ಮಿ ಡೇ” ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಹೊಸೊಕ್ಲು ಚಿಣ್ಣಪ್ಪ, ತಂಬಂಡ ನಾಣಯ್ಯ ಹಾಗೂ ಗಣೇಶ್ ತಿಮ್ಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಚಲನಚಿತ್ರ ಕ್ಷೇತ್ರದ ಸೇವೆಗಾಗಿ ಪ್ರಶಸ್ತಿ ಪಡೆದ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಚಿತ್ರ ನಿರ್ಮಾಣ ಮತ್ತು ನಿರ್ದೇಶನದ ಮೂಲಕ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಉತ್ತೇಜನ ನೀಡುತ್ತಿದ್ದಾರೆ. ಇವರ ನಿರ್ದೇಶನದ “ನಾಡ ಪೆದ ಆಶಾ” ಕೊಡವ ಭಾಷಾ ಚಲನಚಿತ್ರ ದೆಹ್ರಡೂನ್, ಚಂಡೀಗಡ್, ಕೊಲ್ಕತ್ತಾ, ಅಸ್ಸಾಂ ಅಂತರರಾಷ್ಟ್ರೀಯ ಚಲಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಇವರದ್ದೇ ನಿರ್ದೇಶನದ “ಪೊಮ್ಮಾಲೆ ಕೊಡಗ್” ಕೊಡವ ಚಿತ್ರದಲ್ಲಿ ಕೊಡಗಿನ ಶ್ರೀಮಂತ ಪರಿಸರ, ಕಲೆ, ಪದ್ಧತಿ, ಪರಂಪರೆ, ಕೊಡವ ಭಾಷೆ, ಆಚಾರ, ವಿಚಾರ ಮತ್ತು ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆ. ಇಲ್ಲಿಯವರೆಗೆ ಬಂದಿರುವ 27 ಕೊಡವ ಸಿನಿಮಾಗಳಲ್ಲಿ “ಪೊಮ್ಮಾಲೆ ಕೊಡಗ್” ಕೊಡವ ಸಿನಿಮಾ ಪ್ರಥಮ ಬಾರಿಗೆ ಕೊಲ್ಕತ್ತ ಅಂತರರಾಷ್ಟ್ರೀಯ ಚಲಚಿತ್ರೋತ್ಸವ ಏಷ್ಯನ್ ಕಾಂಪಿಟೆಷನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೊಸೊಕ್ಲು ಎ.ಚಿಣ್ಣಪ್ಪ ಅವರು 1984 ರಲ್ಲಿ ಭೂಸೇನೆಯ ಮದ್ರಾಸ್ ರೆಜಿಮೆಂಟ್ ಗೆ ಭರ್ತಿಯಾಗಿ 2016ರ ವರೆಗೆ ಸೇವೆ ಮಾಡಿ ಆನರರಿ ಕ್ಯಾಪ್ಟನ್ ಆಗಿ ನಿವೃತ್ತಿ ಹೊಂದಿದ್ದಾರೆ. ಸೇನೆಯಲ್ಲಿರುವಾಗಲೇ ಮೆರಾತನ್ ಮತ್ತು ಕ್ರಾಸ್ ಕಂಟ್ರಿಯಲ್ಲಿ ಭಾಗವಹಿಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ 88 ಚಿನ್ನ, 31 ಬೆಳ್ಳಿ ಹಾಗೂ 18 ಕಂಚಿನ ಪದಕ ಗೆದ್ದಿದ್ದಾರೆ. ಇವರು ಎರಡು ಬಾರಿ ಚೀಫ್ ಆಫ್ ಆರ್ಮಿ ಸ್ಟಾಫ್ ಪದಕ ಪಡೆದಿದ್ದು, ನಿವೃತ್ತಿ ನಂತರ ಮೂಲ ಕಸುಬು ಕೃಷಿಯನ್ನು ಮುಂದುವರೆಸಿದ್ದಾರೆ.
ತಂಬಂಡ ನಾಣಯ್ಯ ಅವರು ಕೂಡ ಭೂಸೇನೆಯ ಮದ್ರಾಸ್ ರೆಜಿಮೆಂಟ್ ಗೆ ಭರ್ತಿಯಾಗಿ ಆನರರಿ ಕ್ಯಾಪ್ಟನ್ ಆಗಿ ನಿವೃತ್ತಿ ಹೊಂದಿದ್ದಾರೆ. ಮೆರಥಾನ್ ಮತ್ತು ಕ್ರಾಸ್ ಕಂಟ್ರಿ ಓಟದಲ್ಲಿ ಭಾಗವಹಿಸಿ 22 ಚಿನ್ನದ ಪದಕ ಪಡೆದುಕೊಂಡಿದ್ದು, ನಿವೃತ್ತಿ ನಂತರ ಕೃಷಿಯನ್ನು ಮುಂದುವರೆಸಿದ್ದಾರೆ.
ಸೋಮೆಂಗಡ ಗಣೇಶ್ ತಿಮ್ಮಯ್ಯ ಅವರು ಭೂಸೇನೆಗೆ ಸೇರಿ ಆಪರೇಷನ್ ಬ್ಲೂಸ್ಟಾರ್‍ನಲ್ಲಿ ಭಾಗವಹಿಸಿ ನಿವೃತ್ತಿ ನಂತರ ಮೂಲ ಕಸುಬು ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಕೃಷಿ ಸಾಧನೆಗಾಗಿ ಎರಡು ರಾಷ್ಟ್ರ, 5 ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.