ನಾಪೋಕ್ಲು ಜ.25 : ಕಂಪ್ಯೂಟರೀಕರಣ ವ್ಯವಸ್ಥೆಯೊಂದಿಗೆ ರಾಷ್ಟ್ರೀಕೃತ ಬ್ಯಾಂಕ್’ಗಳಿಗೆ ಸರಿಸಮವಾಗಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳವಣಿಗೆ ಸಾಧಿಸಿರುವುದು ಆಡಳಿತ ಮಂಡಳಿಯವರ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು.
ಪೊನ್ನಮ್ಮ ಕಾವೇರಪ್ಪ ಕಾಂಪ್ಲೆಕ್ಸ್’ನಲ್ಲಿ ಸೊಸೈಟಿಯ 18ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ತನ್ನ 25ನೇ ವರ್ಷದಲ್ಲಿ 18ಕ್ಕೂ ಅಧಿಕ ಶಾಖೆಗಳನ್ನು ಆರಂಭಿಸಿರುವುದು ಸಂಸ್ಥೆಯ ಪ್ರಾಮಾಣಿಕ ಸೇವೆಗೆ ದೊರೆತ ಮನ್ನಣೆಯಾಗಿದ್ದು, ಬೆಳ್ಳಿಹಬ್ಬದ ಈ ವರ್ಷದಲ್ಲಿ 25ನೇ ಶಾಖೆಯೂ ಆರಂಭವಾಗುವಂತಾಗಲಿ ಎಂದು ಹಾರೈಸಿದರು.
ಸಹಕಾರ ಸಂಸ್ಥೆಗಳು ಕಡಿಮೆ ಬಡ್ಡಿದರದಲ್ಲಿ ಹಾಗೂ ಸುಲಭ ರೀತಿಯಲ್ಲಿ ಗ್ರಾಮೀಣ ಜನರಿಗೆ ಸಾಲ ಸೌಲಭ್ಯವನ್ನು ನೀಡುವಂತಾದಲ್ಲಿ ಅಂತಹ ಸಂಸ್ಥೆಗಳು ಜನರ ಗೌರವಕ್ಕೆ ಪಾತ್ರವಾಗುತ್ತವೆ. ನಾಪೋಕ್ಲುವಿನಲ್ಲಿ ಆರಂಭಗೊಂಡಿರುವ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸೇವೆಯನ್ನು ಈ ಭಾಗದ ಜನತೆ ಸದುಪಯೋಗ ಪಡಿಸುಕೊಳ್ಳುವಂತಾಗಬೇಕು ಎಂದು ಆಶಿಸಿದರು.
ಸಂಸ್ಥೆಯ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ, ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್’ನ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ, ಕೊಡಗಿನ ಬಹುತೇಕ ಸಹಕಾರ ಸಂಸ್ಥೆಗಳು ದಶಮಾನೋತ್ಸವವನ್ನು ಆಚರಿಸುತ್ತಿವೆ. ಆದರೆ ದಕ್ಷಿಣ ಕನ್ನಡದ ಸಹಕಾರ ಕ್ಷೇತ್ರ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗುಣಮಟ್ಟದ ಸೇವೆಯೇ ಬ್ಯಾಂಕ್’ಗಳ ಬೆಳವಣಿಗೆಗೆ ಅಡಿಗಲ್ಲು ಎಂದು ವಿಶ್ಲೇಷಿಸಿದ ಅವರು, ಕೇವಲ 6 ಲಕ್ಷ ರೂ. ಬಂಡವಾಳದಲ್ಲಿ ಆರಂಭಗೊಂಡ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 25ವರ್ಷಗಳಲ್ಲಿ 19 ಶಾಖೆಗಳನ್ನು ಹೊಂದುತ್ತಿರುವುದು ಸಣ್ಣ ಸಾಧನೆಯಲ್ಲ. ಆಡಳಿತ ಮಂಡಳಿಯ ಬದ್ಧತೆ, ಸದಸ್ಯರ ಪ್ರೋತ್ಸಾಹದಿಂದ ಮಾತ್ರ ಇದು ಸಾಧ್ಯವಾಗಿದ್ದು, ಸಂಸ್ಥೆಯು ಹೊರ ಜಿಲ್ಲೆಗಳಿಗೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿರುವುದು ಸಂಸ್ಥೆಯ ಸೇವಾ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಬ್ಯಾಂಕ್’ನ ಸಾಧನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರಲ್ಲದೆ, 25ನೇ ವರ್ಷದಲ್ಲಿ ಸದಸ್ಯರಿಗೆ ಶೇ.25ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದರು.
ಕೊಡಗಿನಲ್ಲಿರುವ ಶಾಖೆಗಳು ಕೂಡಾ ಗ್ರಾಹಕರಿಗೆ ಸಾಲ ವಿತರಣೆಯೊಂದಿಗೆ ಸಕಾಲದಲ್ಲಿ ಸಾಲ ವಸೂಲಾತಿಯೊಂದಿಗೆ ಪ್ರಗತಿಯ ಪಥದಲ್ಲಿ ಸಾಗುತ್ತಿದ್ದು, ಪ್ರಸಕ್ತ ಆರಂಭವಾಗುತ್ತಿರುವ ಶಾಖೆಗಳುಕೂಡಾ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಗಣಕೀಕರಣ ವ್ಯವಸ್ಥೆಯನ್ನು ಉದ್ಘಾಟಿಸಿದ ಮಡಿಕೇರಿ ಸರ್ವೋದಯ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಅಂಬೆಕಲ್ಲು ಅವರು ಪ್ರಥಮ ಠೇವಣಿ ಪತ್ರ ವಿತರಿಸಿದರೆ, ಪ್ರಥಮ ಉಳಿತಾಯ ಖಾತೆ ಪತ್ರವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ತುಳಸಿ ಮೋಹನ್ ಕಡ್ಲೇರ ವಿತರಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಹಾರೈಸಿದರು. ಹಾಗೂ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಎ.ಕೆ.ನವೀನ್ ಅಪ್ಪಯ್ಯ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಅತಿಥಿಗಳಿಗೆ ಸಾಲೋಧಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಂಸ್ಥೆಯ ನಿರ್ದೇಶಕರಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಕೆ.ಸಿ.ನಾರಾಯಣ ಗೌಡ, ಕೆ.ಸಿ.ಸದಾನಂದ, ಪಿ.ಎಸ್.ಗಂಗಾಧರ, ದಿನೇಶದ ಮಡಪ್ಪಾಡಿ, ದಾಮೋದರ ಎನ್.ಎಸ್, ನಳಿನಿ ಸೂರಯ್ಯ, ಲತಾ ಎಸ್. ಮಾವಜಿ, ಬಿ.ಕೆ.ಹೇಮಚಂದ್ರ, ಶೈಲೇಶ್ ಅಂಬೆಕಲ್ಲು, ನವೀನ್ ಕುಮಾರ್ ಜೆ.ವಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಬ್ಯಾಂಕಿನ ಸಿಬ್ಬಂದಿ ವರ್ಗ ಮತ್ತಿತರರು ಹಾಜರಿದ್ದರು.
ರವಿ ಓಂಕಾರ್ ಪ್ರಾರ್ಥಿಸಿದರೆ, ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ ಸ್ವಾಗತಿಸಿದರು. ನಿರ್ದೇಶಕ ದಿನೇಶ್ ಮಡಪ್ಪಾಡಿ ನಿರೂಪಿಸಿ, ನಿರ್ದೇಶಕ ಪಿ.ಎಸ್.ಗಂಗಾಧರ ವಂದಿಸಿದರು.
ವರದಿ : ದುಗ್ಗಳ ಸದಾನಂದ