ಶನಿವಾರಸಂತೆ ಜ.27 : ವಿಶ್ವದಲ್ಲೆ ಹಿರಿದಾದ ಭಾರತದ ಸಂವಿಧಾನವನ್ನು ರಚಿಸಿ ನಮ್ಮೆಲ್ಲಾರಿಗೂ ಸಮಾನತೆ ತಂದುಕೊಟ್ಟ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎಲ್ಲಾರೂ ಪ್ರತಿದಿನ ನೆನಪಿಸಿಕೊಳ್ಳಬೇಕಿದೆ ಎಂದು ಗೋಣಿಮರೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆಶಾ ಅಭಿಪ್ರಾಯಪಟ್ಟರು.
ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಹಾಲಿ ಹಾಗೂ ನಿವೃತ್ತ ಸೈನಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಸಂವಿಧಾನಕ್ಕೆ ತಳಹದಿ ಹಾಕಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವ ಮಟ್ಟದ ನಾಯಕರಾಗಿದ್ದಾರೆ ಇಂದು ನಾವೆಲ್ಲಾರೂ ಸಮಾಜದಲ್ಲಿ ಸಮಾನತೆಯಿಂದ ಬದುಕು ನಡೆಸುತ್ತಿದ್ದೇವೆ. ಆದರೆ ಇಂದು ಸಮಾಜದ ಸ್ವಾಸ್ಥ್ಯ ಬದಲಾಗುತ್ತಿದೆ ಈ ನಿಟ್ಟಿನಲ್ಲಿ ವಿದ್ಯಾವಂತರ ಮನಸು ಪರಿಶುದ್ಧವಾಗಬೇಕು ಇದರಿಂದ ಸಮಾಜ ಪರಿಶುದ್ಧವಾಗಿ ಬದಲಾಗುತ್ತದೆ ಎಂದರು.
ಕೂಡಿಗೆಯ ನಿವೃತ್ತ ಸೈನಿಕ ಹಾಗೂ ಪ್ರಸ್ತುತ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿರುವ ಗಣೇಶ್ ಮಾತನಾಡಿ, ಹಿರಿಯ ನಾಯಕರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಮತ್ತು ಸಂವಿಧಾನ ರಚಿಸಲು ತುಂಬಾ ಕಷ್ಟ ಪಟ್ಟಿದ್ದಾರೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವ ಸಮೂಹ ದೇಶ ಮತ್ತು ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಮುಂದಾಗುವಂತೆ ಸಲಹೆ ನೀಡಿದರು.
ನಿವೃತ್ತ ಸೈನಿಕ ಚಂದ್ರು ಮಾತನಾಡಿ, ಪ್ರತಿಯೊಬ್ಬರು ರಾಷ್ಟ್ರಭಕ್ತಿ ಮೈಗೂಡಿಸಿಕೊಳ್ಳಬೇಕು, ವಿಶ್ವದ ಇತರೆ ಕೆಲವು ದೇಶದ ದುಸ್ಥಿತಿಯನ್ನು ಗಮನಿಸಿದರೆ ನಮ್ಮ ರಾಷ್ಟ್ರ ಪ್ರತಿಯೊಂದರಲ್ಲೂ ಸಂಪತ್‌ಭರಿತವಾಗಿದೆ ಈ ದಿಸೆಯಲ್ಲಿ ಎಲ್ಲಾರೂ ದೇಶದ ಉನ್ನತ್ತಿಗಾಗಿ ಶ್ರಮಿಸಬೇಕಿದೆ ಎಂದರು.
ಹಾಲಿ ಸೈನಿಕ ರೂಪೇಶ್, ನಿವೃತ್ತ ಸೈನಿಕ ರವಿ, ನಿವೃತ್ತ ಸೈನಿಕ ಕಿಶೋರ್ ಕುಮಾರ್, ಆಲೂರುಸಿದ್ದಾಪುರ ಪಿಡಿಒ ಹರೀಶ್ ಮಾತನಾಡಿದರು.
ಮೊರಾರ್ಜಿ ಶಾಲೆಯ ಪ್ರಾಂಶುಪಾಲೆ ಕೆ.ಎನ್.ಭಾರತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಲಿ ಸೈನಿಕ ರೂಪೇಶ್, ನಿವೃತ್ತ ಸೈನಿಕರಾದ ಚಂದ್ರು, ಗಣೇಶ್, ಕಿಶೋರ್‌ಕುಮಾರ್, ಸೋಮಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ವಸತಿ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ನೀಡಲಾಯಿತು.
ವಿದ್ಯಾರ್ಥಿಗಳು ರಂಗೋಲಿ ಸುತ್ತಾ ಹಣತ್ತೆ ಹಚ್ಚುವ ಮೂಲಕ ಬೀಳ್ಕೊಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಣರಾಜ್ಯೋತ್ಸವ ಅಂಗವಾಗಿ ನಿವೃತ್ತ ಸೈನಿಕ ಸೋಮಣ್ಣ ಧ್ವಜರೋಹಣ ನೆರವೇರಿಸಿದರು. ನಂತರ ಶಾಲೆಯ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ, ಪಥಸಂಚಲನ, ಲೇಜಿಮ್ಸ್, ಡ0ಬಲ್ಸ್, ಹೊಪ್ಸ್, ಪಿರಮಿಡ್, ಯೋಗಾಸನ, ಏರೋಬಿಕ್ಸ್, ದೈಹಿಕ ವ್ಯಾಯಾಮ, ಕರಾಟೆ, ಸಿಟ್ಟಿಂಗ್ ಸಿರೀಸ್ ಮುಂತಾದ ಕ್ರೀಡಾ ಪ್ರದರ್ಶನ ನಡೆಯಿತು.
(ಚಿತ್ರ ವರದಿ : ಕೆ.ಎನ್.ದಿನೇಶ್ ಮಾಲಂಬಿ-ಶನಿವಾರಸಂತೆ)