ನಾಪೋಕ್ಲು ಜ.27 : ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ 2.76 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ವಿವಿಧ ಶಾಲಾ ಕಟ್ಟಡಗಳನ್ನು ಶಾಲಾ ಶಿಕ್ಷಣ ಸಾಕ್ಷರತಾ ಮತ್ತು ಸಕಾಲ ಖಾತೆ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ ಉದ್ಘಾಟಿಸಿದರು.
ನಂತರ ನಡೆದ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಬಡ ಮತ್ತು ಮಧ್ಯಮ ವರ್ಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಆಂಗ್ಲಭಾಷೆ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಕೆಪಿಎಸ್ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ದಿವಂಗತ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನಂತೆ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಸರ್ವ ಶಿಕ್ಷಣ ಅಭಿಯಾನವನ್ನು ಎರಡು ಸಾವಿರ ಇಸವಿಯಲ್ಲಿ ಪ್ರಾರಂಭಿಸಲಾಗಿದೆ. ನಮ್ಮ ದೇಶದ ಪ್ರತಿಯೊಬ್ಬ ಹೆಣ್ಣು ಮಗು ಸ್ವಾವಲಂಬಿಯಾಗಿ, ಸ್ವಾಭಿಮಾನಿಯಾಗಿ ಬದುಕಬೇಕಾದರೆ ಒಳ್ಳೆಯ ಶಿಕ್ಷಣವನ್ನು ಕೊಡಬೇಕು. ಅದಕ್ಕೆ ಆದ್ಯತೆಯನ್ನು ನೀಡಲು “ಭೇಟಿ ಪಡಾವೊ ಭೇಟಿ ಬಚಾವೊ” ಆಂದೋಲನವನ್ನು ಪ್ರಧಾನಮಂತ್ರಿಯವರು ಪ್ರಾರಂಭಿಸಿದೆ.ಅದರಂತೆ ಎಲ್ಲಾ ಶಾಲೆಗಳಲ್ಲೂ ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಉತ್ತಮವಾದ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ ನಿಂದ ಜಿಲ್ಲೆಯಲ್ಲಿ ಅಪಾರ ನಷ್ಟಸಂಭವಿಸಿದೆ. ಆದರೂ ರಾಜ್ಯದಲ್ಲಿ ಈ ವರ್ಷ 9 ಸಾವಿರಕ್ಕೂ ಅಧಿಕ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು. ರಾಜ್ಯದಲ್ಲಿ ಶಿಕ್ಷಣಕ್ಕೆ ಬಿಜೆಪಿ ಸರ್ಕಾರ ಒತ್ತುನೀಡಿದಷ್ಟು ಬೇರೆ ಯಾವ ಸರ್ಕಾರ ಒತ್ತು ನೀಡಿಲ್ಲ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಶಿಕ್ಷಕರು ಪದವಿ ಪಡೆದರು ಅನೇಕ ಪರೀಕ್ಷೆಗಳನ್ನು ಬರೆದು ಸರ್ಕಾರಿ ಶಾಲೆಯಲ್ಲಿ ನೇಮಕ ಮಾಡಲಾಗುತ್ತದೆ.ಮುಂದಿನ ಶೈಕ್ಷಣಿಕ ವರ್ಷದೊಳಗೆ ಎಲ್ಲಾ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಿ ಶಿಕ್ಷಕರ ಕೊರತೆ ನಿಗಿಸಲಾಗುವುದು ಎಂದರು.
ಸರ್ಕಾರದಿಂದ ಶಿಕ್ಷಣಕ್ಕೆ ಅನೇಕ ರೀತಿಯ ಸೌಲಭ್ಯಗಳು ದೊರಕುತ್ತಿದ್ದು ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಅಧ್ಯಕ್ಷರು ಹಾಗೂ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ಶಿಕ್ಷಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಅವರ ಕ್ಷೇತ್ರದಲ್ಲಿ ಮಾಡಿದೆ ಅನ್ನುವುದಕ್ಕೆ ಇದೆ ಶಾಕ್ಷಿ ಎಂದರು. ಈ ಸಂದರ್ಭ ಶಾಲೆಯ ಸ್ವಚ್ಛತೆ ಉತ್ತಮ ವ್ಯವಸ್ಥೆಯನ್ನು ಕಂಡು ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯನ್ನು ಪ್ರಶಂಶಿಸಿದರು.
ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಶಿಕ್ಷಣಕ್ಕೆ ಒತ್ತಾಸೆಯನ್ನು ನೀಡಬೇಕು, ಯಾವಸಮಾಜ ಶಿಕ್ಷಣಭರಿತವಾಗಿರುತ್ತದೊ ಅದರಿಂದ ಒಳ್ಳೆಯ ಸಮಾಜ ನಿರ್ಮಾಣವಾಗಿ ದೇಶದ ಅಭಿವೃದ್ಧಿ ಸಾಧ್ಯ ಎಂದರು. ಈ ಹಿಂದೆ ಶಾಲೆಗಳಲ್ಲಿ ಸೌಚಾಲಯ ಹಾಗೂ ಕಟ್ಟಡಗಳ ಕೊರತೆಯಿಂದ ಹೆಣ್ಣು ಮಕ್ಕಳು ಶಿಕ್ಷಣವನ್ನು ಮೊಟುಕುಗೊಳಿಸುತ್ತಿದ್ದರು. ಇದನ್ನು ಹೋಗಲಾಡಿಸಲು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.
ಈ ಸಂದರ್ಭ ಅತಿಥಿಗಳಾಗಿ ಆಗಮಿಸಿದ ಗಣ್ಯರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಬಿ.ಸಿ. ಸತೀಶ್, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್, ನಿವೃತ್ತ ನ್ಯಾಯಾಧೀಶ ವಿ.ಜಿ. ಬೋಪಯ್ಯ, ಜೀವವೈವಿಧ್ಯಮಂಡಳಿ ಅಧ್ಯಕ್ಷ ರವಿ ಕಾಳಪ್ಪ, ಶಾಲೆಯ ಎಸ್‍ಡಿಎಂಸಿ ಉಪಾಧ್ಯಕ್ಷ ಕೆ.ಎ. ಹಾರಿಸ್, ಉಪಸಮಿತಿಯ ಜಿನ್ನು ನಾಣಯ್ಯ, ಎನ್. ಎಸ್. ಉದಯಶಂಕರ್, ಶಿಕ್ಷಣ ಇಲಾಖೆಯ ಸಿ.ಪುಟ್ಟರಾಜು, ಸಿ.ರಂಗದಾಮಯ್ಯ, ಎಂ. ಕೃಷ್ಣಪ್ಪ,ಲೋಕೋಪಯೋಗಿ ಇಲಾಖೆ ಅಭಿಯಂತರ ಕೆ.ಟಿ. ರವಿಕುಮಾರ್, ಡಿ. ನಾಗರಾಜ್, ದ್ರುವ ರಾಜ, ಪಿ. ಸತೀಶ್, ಗುತ್ತಿಗೆದಾರ ಟಿ.ಎನ್ ಬಾಬು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲೆಯ ಎಲ್ಲಾ ಶಿಕ್ಷಕ ವೃಂದ, ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಉಷಾರಾಣಿ ನಿರೂಪಿಸಿದರು. ಪ್ರಾಂಶುಪಾಲೆ ಅವನಿಜ ಸೋಮಯ್ಯ ಸ್ವಾಗತಿಸಿ, ಉಪಾಪ್ರಾಂಶುಪಾಲ ಶಿವಣ್ಣ ವಂದಿಸಿದರು. ಬಳಿಕ ನಡೆದ ವಿದ್ಯಾರ್ಥಿಗಳ ವಿವಿಧ ನೃತ್ಯ ವೈಭವದ ಸಾಂಸ್ಕೃತಿಕ ಕಾರ್ಯಕ್ರ ನೋಡುಗರನ್ನು ರಂಜಿಸಿತು.