ಪೊನ್ನಂಪೇಟೆ, ಜ.27: ವಿರಾಜಪೇಟೆ ಸಮೀಪದ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿ ಮತ್ತು ಬುಸ್ತಾನುಲ್ ಉಲೂಂ ಹೈಯರ್ ಸೆಕೆಂಡರಿ ಮದರಸ ವತಿಯಿಂದ 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಧ್ವಜಾರೋಹಣ ನಡೆಸಿ, ರಾಷ್ಟ್ರಗೀತೆಯೊಂದಿಗೆ ಧ್ವಜವಂದನೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮದರಸ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ದುದ್ದಿಯಂಡ ಎಚ್. ಸೂಫಿ ಹಾಜಿ ಅವರು, ದೇಶದ ಸರ್ವ ಪ್ರಜೆಗೂ ಸಮಾನತೆ, ಶಿಕ್ಷಣ ಇತರೆ ಮೂಲಭೂತ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಜಾರಿಗೆ ತರಲು ಶ್ರಮಿಸಿದ ಡಾ. ಅಂಬೇಡ್ಕರ್ ಸೇರಿದಂತೆ ದೇಶದ ಭವಿಷ್ಯದ ಕುರಿತು ದೂರದೃಷ್ಟಿತ್ವ ಹೊಂದಿದ್ದ ಎಲ್ಲಾ ಮಹನೀಯರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವವನ್ನು ಸ್ಥಾಪಿಸಿದ ದಿನವಾದ ಈ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ ಎಂದು ಹೇಳಿದರು.
ನಿವೃತ್ತ ಜಿಲ್ಲಾ ಖಜನಾಧಿಕಾರಿ ಕನ್ನಡಿಯಂಡ ಎ. ಆಲಿ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಮದರಸ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಒಂದೇ ನಾವೆಲ್ಲರೂ ಒಂದೇ, ನಮಗೊಂದೇ ಈ ಭಾರತ’ ಎಂಬ ಸಮೂಹ ಗಾನ ವಿಶೇಷವಾಗಿ ಆಕರ್ಷಿಸಿತು.
ಮಸೀದಿಯ ಧರ್ಮ ಗುರುಗಳಾದ ಸಿದ್ದೀಕ್ ಫಾಝಿಳಿ, ಝಿಯಾದ್ ದಾರಿಮಿ, ಸದರ್ ಮುಸ್ಲಿಯಾರ್ ಡಿ. ಎ. ಸಿರಾಜ್ ಜುಹರಿ, ಶಿಯಾಬ್ ಸಹದಿ, ಆಡಳಿತ ಮಂಡಳಿ ಉಪಾಧ್ಯಕ್ಷ ಡಿ.ಎ. ಅಶ್ರಫ್, ಕಾರ್ಯದರ್ಶಿ ಡಿ.ಎಂ. ಯೂಸುಫ್, ಜಂಟಿ ಕಾರ್ಯದರ್ಶಿ ಪಿ.ಎ. ಹಮೀದ್, ನಿವೃತ್ತ ಯೋಧರಾದ ಪಟ್ಟಿಯಡ ಸಾಧಲಿ, ಆಡಳಿತ ಮಂಡಳಿ ಮಾಜಿ ಉಪಾಧ್ಯಕ್ಷ ಕೆ.ಎ. ಜುಬೈರ್, ಪ್ರಮುಖರಾದ ಮಜೀದ್, ಸಿರಾಜ್ ಸೇರಿದಂತೆ ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಿನದ ಅಂಗವಾಗಿ ಕೊನೆಗೆ ಎಲ್ಲರಿಗೂ ಸಿಹಿ ಹಂಚಲಾಯಿತು.