ಮಡಿಕೇರಿ ಜ.27 : ರಾಷ್ಟ್ರದ ಉನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ ರಾಣಿ ಮಾಚಯ್ಯ ಅವರನ್ನು ಕೊಡಗು ಜಾನಪದ ಪರಿಷತ್ ವತಿಯಿಂದ ಗೌರವಿಸಲಾಯಿತು.
ರಾಣಿ ಮಾಚಯ್ಯ ಅವರ ಮನೆಗೆ ತೆರಳಿ ಗೌರವಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ.ಜಿ.ಅನಂತ ಶಯನ, ಕೊಡಗು ಜಾನಪದ ಪರಿಷತ್ ಉಪಾಧ್ಯಕ್ಷರಲ್ಲಿ ಒಬ್ಬರಾಗಿರುವ ರಾಣಿ ಮಾಚಯ್ಯ ಅವರಿಗೆ ಸಂದ ಗೌರವ ಪರಿಷತ್ ಮತ್ತು ಕೊಡಗು ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ನುಡಿದರು.
ಪದ್ಮಶ್ರೀ ಪ್ರಶಸ್ತಿ ಅನಿರೀಕ್ಷಿತವಾಗಿ ತಮಗೆ ದೊರೆತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ರಾಣಿ ಮಾಚಯ್ಯ ನುಡಿದರು.
ಜಾನಪದ ಪರಿಷತ್ ಮೂರ್ನಾಡು ಘಟಕದ ಅಧ್ಯಕ್ಷ ಪ್ರಶಾಂತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ಪ್ರಾಂಶುಪಾಲ ಸಿದ್ದರಾಜು ಹಾಗೂ ಮಡಿಕೇರಿ ತಾಲೂಕು ಕ.ಸಾ.ಪ. ಪ್ರಧಾನ ಕಾರ್ಯದರ್ಶಿ ರಂಜಿತ್ ಮಾತನಾಡಿ, ರಾಣಿ ಮಾಚಯ್ಯ ಅವರು ಕೊಡಗಿನ ಸಂಸ್ಕೃತಿಗೆ ಸಲ್ಲಿಸುತ್ತಿರುವ ನಿರಂತರ ಸೇವೆಯನ್ನು ಸ್ಮರಿಸಿದರು.
ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ತಾಲೂಕು ಕ.ಸಾ.ಪ. ಅಧ್ಯಕ್ಷ ಎ.ಕೆ. ನವೀನ್, ಜಿಲ್ಲಾ ಸಮಿತಿ ಸದಸ್ಯೆ ವೀಣಾಕ್ಷಿ ಹಾಜರಿದ್ದರು.