ಸುಂಟಿಕೊಪ್ಪ,ಜ.28 : ಸಮಾಜದಲ್ಲಿ ಉತ್ತಮನಾಗಿರುವುದು, ಇತರರಿಗೆ ಉಪಕಾರಿಯಾಗಿ ಬದುಕುವುದು ಮುಖ್ಯ ಎಂದು ಸುಂಟಿಕೊಪ್ಪ ಗ್ರಾ.ಪಂ.ಉಪಾಧ್ಯಕ್ಷ ಪ್ರಸಾದ್ಕುಟ್ಟಪ್ಪ ಹೇಳಿದರು.
ಸುಂಟಿಕೊಪ್ಪ ಟಿಸಿಎಲ್ ತೋಟದ ಸಾಮ್ರಾಟ್ ಯುವಕ ಸಂಘದ ವತಿಯಿಂದ 74ನೇ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾದ ಪುರುಷರ ಮುಕ್ತ ವಾಲಿಬಾಲ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಎಷ್ಟೇ ಕೋಟಿ ಸಂಪಾದಿಸಿ ಕ್ರೂಢಿಕರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಆದರೆ ನೀವು ನಿಮ್ಮ ಸುತ್ತ ಮುತ್ತಲಿನ ಜನತೆಯಲ್ಲಿ ಉತ್ತಮ ಸ್ನೇಹ ಪ್ರೀತಿ, ವಿಶ್ವಾಸ, ಭಾಂದವ್ಯ ಹೊಂದಿದಲ್ಲಿ ಜೀವಿತ ಕಾಲಕ್ಕೆ ಅರ್ಥ ಬರಲು ಸಾಧ್ಯವೆಂದು ಹೇಳಿದರು.
ಸಮಾರಂಭದಲ್ಲಿ ಸುಂಟಿಕೊಪ್ಪ ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಗೌತಮ್ಮೈನಿ, ಗ್ರಾ.ಪಂ.ಸದಸ್ಯರಾದ ಆಲಿಕುಟ್ಟಿ, ಪಿ.ಎಫ್.ಸಬಾಸ್ಟೀನ್, ಪಿ.ಆರ್.ಸುನಿಲ್ಕುಮಾರ್ ಕ್ರೀಡೆ ಹಾಗೂ ದಿನದ ಮಹತ್ವದ ಕುರಿತು ಮಾತನಾಡಿದರು.
ವಿವಿಧ ಭಾಗಗಳಿಂದ 12 ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು, ಫೈನಲ್ ಪಂದ್ಯಾವಳಿಯು ಹೊಸತೋಟ ಹಾಗೂ ಅತಿಥೇಯ ಸಾಮ್ರಾಟ್ ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ಪಂದ್ಯಾವಳಿಯಲ್ಲಿ ಅತಿಥೇಯ ಸಾಮ್ರಾಟ್ ತಂಡವು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಣ, ಕ್ರೀಡೆ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ ಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಗ್ರಾ.ಪಂ.ಸದಸ್ಯರುಗಳಾದ ಶಬ್ಬೀರ್, ವನಿತಾ, ಕಂಬಿಬಾಣೆ ಗ್ರಾ.ಪಂ.ಸದಸ್ಯೆ ಚಂದ್ರವತಿ ಹಾಗೂ ಸಾಮ್ರಾಟ್ ಯೂತ್ ಕ್ಲಬ್ ಅಧ್ಯಕ್ಷ ಈಶ್ವರ, ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಸಾಮ್ರಾಟ್ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಆಕರ್ಷಕ ಟ್ರೋಫಿ ಹಾಗೂ 10,000 ನಗದನ್ನು ತನ್ನದಾಗಿಸಕೊಂಡಿತು. ದ್ವಿತೀಯ ಸ್ಥಾನಕ್ಕೆ ಹೊಸತೋಟ ತಂಡ ತೃಪ್ತಿಪಟ್ಟುಕೊಂಡಿತು. ತೃತೀಯ ಬಹುಮಾನವನ್ನು ಪನ್ಯ ತಂಡವು ಪಡೆದುಕೊಂಡಿತು.