ಮಡಿಕೇರಿ ಫೆ.13 : ಕೊಡಗು ಜಿಲ್ಲೆಯ ಕುಟ್ಟ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯೊಳಗೆ ಎರಡು ಕೂಲಿ ಕಾರ್ಮಿಕರ ಜೀವಗಳನ್ನು ಬಲಿ ತೆಗೆದುಕೊಂಡ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅನುಮತಿ ನೀಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.
ಈ ಪತ್ರಿಕಾ ಪ್ರಕಟಣೆ ನೀಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕಾರ್ಮಿಕರನ್ನು ಬಲಿಪಡೆಯುವ ಹುಲಿಯನ್ನು ಹಿಡಿದು ಮತ್ತೊಂದು ಜಾಗಕ್ಕೆ ಸ್ಥಳಾಂತರ ಮಾಡಿ ನಂತರ ಅಲ್ಲಿಯೂ ಮತ್ತೊಂದು ಅವಘಡ ನಡೆಯುವುದಕ್ಕಿಂತ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಆದೇಶ ನೀಡಬೇಕಿದೆ. ನೀಡಬೇಕು. ಅಥವಾ ತಕ್ಷಣ ಕಾರ್ಯಾಚರಣೆ ಮೂಲಕ ಸೆರೆಹಿಡಿದು ಬೇರೆ ಜಾಗಕ್ಕೆ ಸ್ಥಳಾಂತರ ಮಾಡದೆ, ಮೃಗಾಲಯದಲ್ಲಿಯೇ ಕೂಡಿಡಬೇಕು ಎಂದು ಒತ್ತಾಯಿಸಿದರು.
ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ನೀಡಿದರೆ ಗ್ರಾಮಸ್ಥರು ಕೂಡ ಇಲಾಖೆಗೆ ಸಾಥ್ ನೀಡುತ್ತಾರೆ. ಕಾನೂನಿಗೆ ಬೆಲೆ ಕೊಡುವ ಮಂದಿ ಜಿಲ್ಲೆಯವರಾಗಿರುವ ಕಾರಣ ವನ್ಯಮೃಗಗಳ ಕಾಟವನ್ನು ಈಗಲೂ ಸಹಿಸಿಕೊಂಡಿದ್ದಾರೆ. ಈ ಹಿಂದೆ ಹುಲಿಯನ್ನು ಕೊಂದು ಅದರೊಂದಿಗೆ ಮದುವೆ ಮಾಡಿಕೊಂಡ ಘಟನೆಯೂ ನಡೆದಿದೆ. ಇಲಾಖೆ ಸಾಧ್ಯವಾಗದಿದ್ದರೆ ಸ್ಥಳೀಯರಿಗೆ ಅನುಮತಿ ನೀಡಿ 24 ಗಂಟೆಯೊಳಗೆ ಹುಲಿ ಸೆರೆಹಿಡಿಯುವುದಾಗಿ ಕಿಡಿಕಾರಿದ್ದಾರೆ.
ಈಗಾಗಲೇ ಅರಣ್ಯದ ಗಡಿಭಾಗದ ಗುರುತಿಗೆ ಕಲ್ಲುಗಳನ್ನು ಹಾಕುವ ನೆಪದಲ್ಲಿ ಈ ಭಾಗದ ರಸ್ತೆಗಳನ್ನು ಸೇರಿಸಿ ಮಾಲಿಕರುಗಳ ತೋಟದಂಚಿಗೆ ಗಡಿ ಗುರುತಿನ ಕಲ್ಲುಗಳನ್ನು ಹಾಕಿದೆ. ಅರಣ್ಯದ ಗಡಿ ಗುರುತಿಸುವ ಇಲಾಖೆಗೆ ಕಾಡಿನೊಳಗಿರುವ ವನ್ಯ ಮೃಗಗಳು ಆ ಗಡಿದಾಟಿ ರೈತರ ಜಮೀನಿಗೆ ಬಾರದಂತೆ ತಡೆಯಲು ಯೋಜನೆ ರೂಪಿಸಬಹುದಲ್ಲವೇ ಎಂದು ಪ್ರಶ್ನಿಸಿದರು.
ಇದೀಗ ಅಕಾಲಿಕ ಮಳೆಯ ಕಾರಣ ಮತ್ತೆ ಕಾಫಿ ಕೆಲಸ ತಡವಾಗಿ ಆರಂಭವಾಗಿದೆ. ಹಲವಾರು ತೋಟದ ಮಾಲಿಕರು ನೀರು ಹಾಯಿಸಲು ಶುರು ಮಾಡಿದ್ದಾರೆ, ವರ್ಷದ ಬದುಕನ್ನು ಕಟ್ಟಿಕೊಳ್ಳುವ ಸಮಯದಲ್ಲಿ ಪ್ರತಿವರ್ಷವೂ ರೈತರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಕಳೆದ ಬಾರಿಯೂ ಬೆಳ್ಳೂರು ಶ್ರೀಮಂಗಲ ವ್ಯಾಪ್ತಿಯಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಬೆಳೆಗಾರ ತತ್ತರಿಸಿದರು. ಇದೀಗ ಕುಟ್ಟ ಭಾಗದಲ್ಲಿ ವ್ಯಾಘ್ರನ ಉಪಟಳದಿಂದ ಬೆಳೆಗಾರರು ಕಂಗಾಲಾಗಿದ್ದಾರೆ, ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣವೇ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ನೀಡಬೇಕಿದೆ ನೀಡುವಂತೆ ಒತ್ತಾಯಿಸಿದ ಅವರು ಕ್ರಮ ಕೈಗೊಳ್ಳಲು ಸಮಯ ಹಿಡಿದರೆ ರೈತರು ಹಾಗೂ ಸಾರ್ವಜನಿಕರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುವುದಾಗಿ ಚಮ್ಮಟೀರ ಪ್ರವೀಣ್ ಉತ್ತಪ್ಪ ಎಚ್ಚರಿಕೆ ನೀಡಿದರು.