ಮಡಿಕೇರಿ ಫೆ.15 : ನರಿಯಂದಡ ಗ್ರಾ.ಪಂ ಗ್ರಾಮ ಸಭೆಯು ಪಂಚಾಯಿತಿ ಅಧ್ಯಕ್ಷರಾದ ಬಿದ್ದಂಡ ರಾಜೇಶ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಲಕ್ಷ್ಮಿ ಮಹಿಳಾ ಸಮಾಜದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರ ಪರವಾಗಿ ಚೇನಂಡ ಜೆಪ್ಪು ದೇವಯ್ಯ ಮಾತನಾಡಿ, ಕೊಕೇರಿಯಲ್ಲಿ ಕಳೆದ ಒಂದು ವರ್ಷದಿಂದ ವಿದ್ಯುತ್ ಸಮಸ್ಯೆ, ಲೈನ್ ಮ್ಯಾನ್ ಸಮಸ್ಶೆ ಬಗ್ಗೆ ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆ ಪರಿಹರಿಸುವ ಬಗ್ಗೆ ಭರವಸೆ ಕೊಟ್ಟು ಹೊರಟ ಚೆಸ್ಕಾಂ ಇಲಾಖೆಯವರು ಕೊಕೇರಿ ಭಾಗಕ್ಕೆ ಬರಲಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಚೆಯ್ಯಂಡಾಣೆ ಸರಕಾರಿ ಆಸ್ಪತ್ರೆಯಲ್ಲಿ ಖಾಯಂ ವೈದ್ಯಾಧಿಕಾರಿ ಇಲ್ಲ ಹಾಗೂ ಕಂದಾಯ ಇಲಾಖೆಯಷ್ಟು ಭ್ರಷ್ಟ ಇಲಾಖೆ ಮತ್ತೊಂದಿಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಚೆಸ್ಕಾಂ ಜೂನಿಯರ್ ಇಂಜಿನಿಯರ್ ಪ್ರಕಾಶ್ ಕೂಡಲೇ ಇದರ ಬಗ್ಗೆ ಲಿಖಿತ ಮಾಹಿತಿ ನೀಡಿ ಖುದ್ದು ಕ್ರಮ ಕೈಗೊಂಡು ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದು ಭರವಸೆ ನೀಡಿದರು.
ಕಂದಾಯ ಇಲಾಖೆಯ ಬಗ್ಗೆ ಅಧಿಕಾರಿ ಅಮೃತ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದು ಭರವಸೆ ನೀಡಿದರು.
ಚೆಯ್ಯಂಡಾಣೆ ಪಾರಾಣೆ ರಸ್ತೆಯ ದುರಾವಸ್ಥೆಯ ಬಗ್ಗೆ ಸಭೆಯಲ್ಲಿ ಬೆಳಿಯಂಡ್ರ ಬೆಳ್ಳಿಯಪ್ಪ ಮಾತನಾಡಿ, ತಕ್ಷಣವೇ ಕಾಮಗಾರಿ ಆರಂಭಿಸುವಂತೆ ಸಂಬಂಧ ಪಟ್ಟ ಇಲಾಖೆಗೆ ಆಗ್ರಹಿಸಿದರು.
ಕರಡ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲ ಎಂಬ ಗ್ರಾಮಸ್ಥರ ಕೋರಿಕೆಗೆ ದ್ವನಿ ಗೂಡಿಸಿದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಕಂದಾಯ ಇಲಾಖೆ ತಕ್ಷಣವೇ ಕರಡ ಗ್ರಾಮದಲ್ಲಿ ಇರುವ ಸರಕಾರಿ ಜಾಗವನ್ನು ಗೊತ್ತುಪಡಿಸಿ 15 ದಿನಗಳ ಒಳಗೆ ಗ್ರಾ.ಪಂ ಗೆ ತಿಳಿಸಿ ನಾವು ಅದರಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ಸ್ಮಶಾನಕ್ಕೆ ಒದಗಿಸಲಾಗುವುದು ಎಂದರು.
ಅಭಿವೃದ್ದಿ ಅಧಿಕಾರಿ ಆಶಾ ಕುಮಾರಿ ಮಾತನಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ತೋಟಗಳಿಗೆ ನದಿ ನೀರನ್ನು ಹಾಯಿಸದಂತೆ ಸೂಚನೆ ನೀಡಿದರು. ಕುಡಿಯುವ ನೀರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೆಜೆಎಂ ನಾ ಅಧಿಕಾರಿ ತೌಸೀಫ್ ಗ್ರಾಮಸ್ಥರ ಪರವಾಗಿ ತಮ್ಮ ಅಳಲನ್ನು ತೊಂಡಿಕೊಂಡರು.
ಇದಕ್ಕೆ ತೌಸಿಫ್ ಪ್ರತಿಕ್ರಿಯಿಸಿ ಕೂಡಲೇ ನೀರಿನ ಎಲ್ಲ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಗ್ರಾ.ಪಂ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಮಾತನಾಡಿ, ನರಿಯಂದಡ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ, ಲೈನ್ ಮ್ಯಾನ್ ಸಮಸ್ಯೆ, ಹಲವಾರು ವಿದ್ಯುತ್ ಅವಘಡ ಸಂಭವಿಸಿದರೂ ಸಹ ವಿದ್ಯುತ್ ಕಂಬ ಬದಲಾಯಿಸಿಲ್ಲ, ಬದಲಾಯಿಸಲು ತಂದ ವಿದ್ಯುತ್ ಕಂಬ ಬೇರೆಡೆ ಸ್ಥಳಾಂತರಿಸಿದ್ದಾರೆ. ಹೀಗೆ ಹಲವಾರು ಸಮಸ್ಯೆಗಳನ್ನು ಚೆಸ್ಕಾಂ ಇಲಾಖೆಯ ಅಧಿಕಾರಿ ಪ್ರಕಾಶ್ ಅವರಿಗೆ ಆಕ್ರೋಷಿತರಾಗಿ ಮಾಹಿತಿ ನೀಡಿ. ಕೂಡಲೇ ಈ ಎಲ್ಲ ಸಮಸ್ಯೆಗಳಿಗೆ 15 ದಿನಗಳ ಗಡುವ ನೀಡಿದ್ದು, ಸಮಸ್ಯೆ ಪರಿಹರಿಸದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದರು.
ಗ್ರಾಮ ಸಭೆಯಲ್ಲಿ ಕೃಷಿ ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿ ನಾರಾಯಣ ರೆಡ್ಡಿ ಮಾಹಿತಿ ನೀಡಿದರು.
ಅರಣ್ಯ ಇಲಾಖೆಯಿಂದ ದೊರೆಯುವ ಸೌಲಭ್ಯದ ಬಗ್ಗೆ ಅರಣ್ಯಧಿಕಾರಿ ಅಕ್ಕಮ್ಮ ಮಾಹಿತಿ ನೀಡಿದರು.
ಪಶು ಇಲಾಖೆಯ ಬಗ್ಗೆ ಪಶು ವೈಧ್ಯಾಧಿಕಾರಿ ಪಳಂಗಪ್ಪ, ಶಿಶು ಇಲಾಖೆಯ ಬಗ್ಗೆ ಸೀತಾ ಲಕ್ಷ್ಮಿ ಹಾಗೂ ವಿವಿಧ ಇಲಾಖೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷೆ ಬಿ.ಎಸ್.ಪುಷ್ಪ, ನೋಡೆಲ್ ಅಧಿಕಾರಿ ಸೀತಾ ಲಕ್ಷ್ಮಿ, ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ ಸಿಬ್ಬಂದಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಸ್ಥಳೀಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಗ್ರಾ.ಪಂ ಕಾರ್ಯದರ್ಶಿ ಬಿದ್ದಪ್ಪ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಸರ್ವರನ್ನು ವಂದಿಸಿದರು.








