

ಮಡಿಕೇರಿ NEWS DESK ಫೆ.16 : ಮಡಿಕೇರಿಯ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಸಂಭ್ರಮ ಅದ್ದೂರಿಯಾಗಿ ನಡೆಯಿತು. ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿರುವ ಕಾಶಿಲಿಂಗಕ್ಕೆ ಕ್ಷೀರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯದಲ್ಲಿ ಸ್ಥಾಪಿಸಲಾಗಿರುವ 52 ಅಡಿ ಎತ್ತರದ ಶಿವನ ವಿಗ್ರಹದ ಸುತ್ತ ಇರುವ ಪಂಚಲಿಂಗಗಳು ಮತ್ತು 109 ಲಿಂಗಗಳಿಗೆ ವಿಶೇಷ ಅಭಿಷೇಕ, ಅಲಂಕಾರ ಮತ್ತು ಪೂಜೆ ನೆರವೇರಿತು.
ಪಂಚಲಿಂಗಕ್ಕೆ ಪವಿತ್ರ ಗಂಗಾಜಲ ಅಭಿಷೇಕ ಮತ್ತು ಶಿವನ ಮೂರ್ತಿಗೆ ಭಕ್ತರು ಪುಷ್ಪಾರ್ಚನೆ ಮಾಡಿದರು. ಬೆಳಿಗ್ಗೆ ದೇವಾಲಯದ ಮುಖ್ಯ ದ್ವಾರದಿಂದ ದೇವಾಲಯದವರೆಗೆ ಸ್ತಬ್ಧಚಿತ್ರ, ಪೂರ್ಣ ಕುಂಭ ಕಳಸ, ಚಂಡೆವಾದ್ಯ, ವೀರಗಾಸೆ, ಡೊಳ್ಳು ಕುಣಿತದೊಂದಿಗೆ ಭಕ್ತಾದಿಗಳ ಮೆರವಣಿಗೆ ಸಂಭ್ರಮದಿAದ ನಡೆಯಿತು. ಧರ್ಮದರ್ಶಿ ಗೋವಿಂದಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಪ್ರಧಾನ ಅರ್ಚಕರಾದ ಶ್ರೀನಿವಾಸ ಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಸಿ.ಚುಮ್ಮಿ ದೇವಯ್ಯ, ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮತ್ತಿತರರು ಪಾಲ್ಗೊಂಡಿದ್ದರು. ಸಂಜೆ ನಡೆದ ದೀಪೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಶ್ರದ್ಧಾಭಕ್ತಿಯಿಂದ ದೀಪಗಳನ್ನು ಬೆಳಗಿದರು. ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ನಡೆದ ಭಕ್ತಿ ಪ್ರಧಾನ ಮನೋರಂಜನಾ ಕಾರ್ಯಕ್ರಮಗಳು ಗಮನ ಸೆಳೆದವು.










