ವಿರಾಜಪೇಟೆ ಫೆ.20 : ಜೆಡಿಎಸ್ ಪಕ್ಷ ಅಧಿಕಾರದ ಅವಧಿಯಲ್ಲಿ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಬಡ ಕಾರ್ಮಿಕ ಕುಟುಂಬಗಳಿಗೆ ಹಾಗೂ ರೈತರಿಗೆ ನೀಡಿದ ಕನಸಿನ ಯೋಜನೆಯ ಕೊಡುಗೆಯನ್ನು ರಾಜ್ಯದ ಜನರ ಮನೆ ಮನೆಗೆ ಕರಪತ್ರ ಹಂಚುವ ಕಾರ್ಯಕ್ಕೆ ಜೆಡಿಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ರಾಜ್ಯ ಮಾದ್ಯಮ ವಕ್ತಾರ ನರಸಿಂಹ ಮೂರ್ತಿ ವಿರಾಜಪೇಟೆಯಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕುಮಾರಸ್ವಾಮಿ ಎರಡು ಬಾರಿ ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ರಾಜ್ಯದ ಜನತೆಗೆ ನೀಡಿದ ಕೊಡುಗೆ ಗ್ರಾಮ ವಾಸ್ತವ್ಯ, ಜನತಾ ದರ್ಶನ, ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರತಿಯೊಬ್ಬ ಸಂತ್ರಸ್ತರಿಗೆ 10 ಲಕ್ಷ ವೆಚ್ಚದ ಸುಸಜ್ಜಿತ ವಸತಿ ಸೌಕರ್ಯ ಕಲ್ಪಿಸಲಾಗಿದ್ದು, ಮಕ್ಕಳ ಉತ್ತಮ ಶಿಕ್ಷಣ ಪಡೆಯಲು ಅವಕಾಶ ಹಾಗೂ ಉಚಿತ ಸೈಕಲ್ ವಿತರಣೆ ಮತ್ತು ಭಾಗ್ಯಲಕ್ಷ್ಮಿ ಯೋಜನೆ, ಬಡವರ ಬಂಧು ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು. ಕುಮಾರ ಸ್ವಾಮಿ ಅವರ ಪಂಚರತ್ನ ಯೋಜನೆ ಮನೆ ಮನೆಗೆ ತಲುಪಿಸುವಂತ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಚುನಾವಣೆಯಲ್ಲಿ ಎಲ್ಲಾ ವರ್ಗದ ಸಮುದಾಯದ ಏಳಿಗೆಗೆ ಜಾತ್ಯತೀತ ಜನತಾ ದಳಕ್ಕೆ ಬಹುಮತ ನೀಡಿ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದ ನರಸಿಂಹ ಮೂರ್ತಿ ಅವರು ಕೊಡಗಿನ ಎರಡು ವಿಧಾನ ಸಭಾ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ತಿಳಿಸಿದರು.
ಈ ಸಂದರ್ಭ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ, ಪ್ರಾದೇಶಿಕ ಪಕ್ಷಕ್ಕೆ ಜನರು ಒಲವು ತೋರಿದ್ದಾರೆ. 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಮನೆ ಮನೆಗೆ ಕರಪತ್ರ ಹಂಚುವ ಸಂದರ್ಭ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಇಸಾಕ್, ಕಾರ್ಯದರ್ಶಿ ಎನ್.ಸಿ.ಸುನಿಲ್, ಮಜೀದ್ ಚೋಕಂಡಳ್ಳಿ, ಸೈಪುದ್ಧಿನ್ ಚಾಮಿಯಾಲ, ಅಮ್ಮತ್ತಿ ಜಯಮ್ಮ, ನೂರ್ ಅಹ್ಮದ್, ಟಿ.ಆರ್.ಹರ್ಷ, ನೌಪಾಲ್ ಮತ್ತಿತರರು ಉಪಸ್ಥಿತರಿದ್ದರು.