ಮಡಿಕೇರಿ ಫೆ.22 : ಜಾತ್ಯತೀತ ಜನತಾದಳದ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಅವರು ಪಕ್ಷವನ್ನು ತೊರೆದಿರುವುದರಿಂದ ಯಾವುದೇ ಲಾಭ ಅಥವಾ ನಷ್ಟವಿಲ್ಲವೆಂದು ಜೆಡಿಎಸ್ ಜಿಲ್ಲಾ ವಕ್ತಾರ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಯಾಣಿಕರು ಒಂದು ಬಸ್ ನಿಂದ ಇಳಿದು ಮತ್ತೊಂದು ಬಸ್ ಗೆ ಏರಿದಂತೆ, ಸಂಕೇತ್ ಅವರು ಮತ್ತೊಂದು ಬಸ್ ನ್ನು ಹತ್ತಿದ್ದಾರೆ. ಅಲ್ಲಿ ಅವರಿಗೆ ರಾಜಕೀಯ ಲಾಭವಾಗುವುದಾದರೆ ಸ್ವಾಗತಾರ್ಹ, ಇದರಿಂದ ಜೆಡಿಎಸ್ ಗೇನು ನಷ್ಟವಿಲ್ಲ. ಸರಳ ಸಜ್ಜನಿಕೆ ಮತ್ತು ರೈತಪರ ಕಾಳಜಿಯ ಹೆಚ್.ಡಿ.ಕುಮಾರಸ್ವಾಮಿ ಅವರ ಮಾನವೀಯ ಗುಣಗಳ ಸಿದ್ಧಾಂತವನ್ನು ಒಪ್ಪಿರುವ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಹಾಗೂ ನಾವುಗಳು ಜೆಡಿಎಸ್ ನಲ್ಲಿಯೇ ಮುಂದುವರೆಯಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇತರೆ ರಾಜಕೀಯ ಪಕ್ಷಗಳು ಅಥವಾ ನಾಯಕರ ವಿರುದ್ಧ ಟೀಕೆ ಮಾಡದೆ ಜೆಡಿಎಸ್ ವಿಚಾರಧಾರೆಗಳನ್ನು ಜನಸಾಮಾನ್ಯರು ಹಾಗೂ ಮತದಾರರಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡಲಿದ್ದೇವೆ. ಕೋರ್ ಕಮಿಟಿ ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ. ಮುಂದಿನ ವಿಧಾನಸಭಾ ಚುನಾವಣೆಗೂ ಇದೇ ನಿಯಮ ಅನ್ವಯವಾಗಲಿದೆ ಎಂದು ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.









