ಮಡಿಕೇರಿ ಫೆ.27 : ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕೊಡಗು ಜಿಲ್ಲೆಯಲ್ಲಿ ಹುಲಿಗಳ ಉಪಟಳ ಹೆಚ್ಚಾಗುತ್ತಿದೆ. ಕಳೆದ 2 ವರ್ಷಗಳಲ್ಲಿ 6 ಮಾನವಜೀವ ಹಾನಿ ಮತ್ತು ಅನೇಕ ಜಾನುವಾರುಗಳು ಸಾವನ್ನಪ್ಪಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ ಕೊಡಗಿನ ಜನರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಡಾನೆಗಳು ತೋಟಗಳನ್ನೇ ಆವಾಸ ಸ್ಥಾನ ಮಾಡಿಕೊಂಡಿದ್ದರೆ, ಹುಲಿಗಳು ಮನುಷ್ಯರನ್ನೇ ಆಹಾರ ಮಾಡಿಕೊಳ್ಳುತ್ತಿವೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ದುರಂತ. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆಗೆ ಕೋಟ್ಯಾಂತರ ಅನುದಾನ ಬರುತ್ತದೆ. ಆದರೆ ವನ್ಯಜೀವಿಗಳು ಆಹಾರವನ್ನು ಅರಸಿ ಜನವಾಸದ ಪ್ರದೇಶಗಳಿಗೆ ದಾಳಿ ಇಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಕಳೆದ 25 ವರ್ಷಗಳಿಂದ ಬಿಜೆಪಿಯವರೇ ಶಾಸಕರುಗಳಾಗಿದ್ದಾರೆ. ಸಂಸದರು ಬಿಜೆಪಿಯವರೇ ಆಗಿದ್ದಾರೆ, ಆದರೆ ಕೊಡಗನ್ನು ಕಾಡುತ್ತಿರುವ ವನ್ಯಜೀವಿಗಳ ದಾಳಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರಕ್ಕೆ ಯಾರೂ ಪ್ರಯತ್ನಿಸಿಲ್ಲ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶಾಸಕರುಗಳು ಎಷ್ಟು ಸಭೆಗಳನ್ನು ನಡೆಸಿದ್ದಾರೆ, ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯಾವ ರೀತಿಯ ಶಿಫಾರಸ್ಸುಗಳನ್ನು ಮಾಡಿದ್ದಾರೆ. ಸಂಸದರು ವನ್ಯಜೀವಿಗಳ ಸಮಸ್ಯೆ ಬಗ್ಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆಯೇ, ಅವರು ಮೈಸೂರಿಗೆ ಮಾತ್ರ ಸಂಸದರೇ, ಕೊಡಗಿನ ಸಮಸ್ಯೆಗಳಿಗೆ ಸ್ಪಂದನೆ ಬೇಡವೇ. ಅನೇಕ ಬಾರಿ ಹುಲಿ ದಾಳಿ ನಡೆದರೂ ಒಂದು ಬಾರಿಯೂ ಸಂಸದರು ಭೇಟಿ ನೀಡಿ ಗ್ರಾಮಸ್ಥರಿಗೆ ಸಾಂತ್ವನ ಹೇಳುವ ದೊಡ್ಡತನವನ್ನು ಯಾಕೆ ಪ್ರದರ್ಶಿಸಿಲ್ಲ. ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳ ವಿಶೇಷ ಸಭೆ ಕರೆದು ಯೋಜನೆ ರೂಪಿಸುವ ಕಾಳಜಿ ತೋರಿಲ್ಲ. ಕೊಡಗಿನ ಕೃಷಿಕ ವರ್ಗಕ್ಕೆ ಇಲ್ಲಿನ ಜನಪ್ರತಿನಿಧಿಗಳ ಬೆಂಬಲ ಸಿಗುತ್ತಿಲ್ಲ ಎಂದು ಟೀಕಿಸಿದರು.
::: ಹೊರಗಿನ ಹುಲಿಗಳು :::
ಗಾಯಗೊಂಡ ಮತ್ತು ವಯಸ್ಸಾದ ನಿಸ್ತೇಜಗೊಂಡ ಹುಲಿಗಳೇ ದಕ್ಷಿಣ ಕೊಡಗು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಾಜಾರೋಷವಾಗಿ ಮುಖ್ಯರಸ್ತೆಗಳಲ್ಲೇ ಸಂಚರಿಸುತ್ತಿವೆ. ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗದೆ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಹೊರ ಭಾಗದಿಂದ ಹುಲಿಗಳು ಕೊಡಗನ್ನು ಪ್ರವೇಶಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಬೇರೆ ಜಿಲ್ಲೆಗಳಲ್ಲಿ ಸೆರೆಯಾದ ಹುಲಿಗಳನ್ನು ಇಲ್ಲಿ ತಂದು ಬಿಡುತ್ತಿರುವ ಬಗ್ಗೆ ಜನರಲ್ಲಿ ಅನುಮಾನಗಳು ಮೂಡುತ್ತಿದೆ. ತಕ್ಷಣ ಅರಣ್ಯ ಇಲಾಖೆ ಹುಲಿದಾಳಿಯ ಕುರಿತು ಕೊಡಗಿನ ಜನರಿಗೆ ಸ್ಪಷ್ಟೀಕರಣ ನೀಡಬೇಕು. ಜಿಲ್ಲೆಯಲ್ಲಿರುವ ಹುಲಿಗಳ ಸಂಖ್ಯೆ ಎಷ್ಟು, ಬೇರೆ ಪ್ರದೇಶಗಳಿಂದ ಹುಲಿಯನ್ನು ತಂದು ಬಿಡಲಾಗುತ್ತಿದೆಯೇ, ಹುಲಿದಾಳಿಗೆ ಕಾರಣವೇನು, ಗಾಯಗೊಂಡಿರುವ ಹುಲಿಗಳೆಷ್ಟು, ಎಷ್ಟು ಹುಲಿಗಳನ್ನು ಸೆರೆ ಹಿಡಿಯಲು ಅನುಮತಿ ಪಡೆಯಲಾಗಿದೆ, ಮಾನವ ಜೀವಹಾನಿಯಾದ ತಕ್ಷಣ ಹುಲಿಸೆರೆಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ, ಕೊಡಗಿನಲ್ಲಿರುವ ಹುಲಿಗಳ ಬಗ್ಗೆ ಅರಣ್ಯ ಇಲಾಖೆ ಅಧ್ಯಯನ ನಡೆಸಿದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಬಹಿರಂಗ ಉತ್ತರವನ್ನು ಅರಣ್ಯ ಅಧಿಕಾರಿಗಳು ನೀಡಬೇಕು ಎಂದು ಒತ್ತಾಯಿಸಿದರು.
ಹುಲಿ ಮತ್ತು ಕಾಡಾನೆಗಳ ಉಪಟಳ ಹೆಚ್ಚು ಇರುವ ಪ್ರದೇಶದಲ್ಲಿ ಜನಪ್ರತಿನಿಧಿಗಳು ಹಾಗೂ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ವಿಶೇಷ ಸಭೆ ನಡೆಸಿ ವಿಶ್ವಾಸ ಮೂಡಿಸಬೇಕು. ವನ್ಯಜೀವಿಗಳ ಆತಂಕವಿರುವ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ಅರಣ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಶಾಶ್ವತ ಪರಿಹಾರಕ್ಕೆ ಕೇಂದ್ರ ಸರ್ಕಾರದ ಮೂಲಕ ಯೋಜನೆ ರೂಪಿಸಲು ಸಂಸದರು ಮುಂದಾಗಬೇಕು ಎಂದರು.
::: ಬಾಣೆ ಗೊಂದಲ :::
ಈಗಾಗಲೇ ಇತ್ಯರ್ಥವಾಗಿರುವ ಬಾಣೆ ಜಾಗದ ವಿಚಾರದಲ್ಲಿ ಕಂದಾಯ ಸಚಿವರು ಮತ್ತೆ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಗುತ್ತಿಗೆ ಆಧಾರದಲ್ಲಿ ಬಾಣೆ ಜಾಗ ನೀಡುವುದಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನೀಡಿದ ಹೇಳಿಕೆಗೆ ಅಧಿಕಾರಿಗಳಿಂದಾದ ತಪ್ಪಿನಿಂದಾಗಿ ಹೀಗಾಗಿದೆ ಎಂದು ಕೊಡಗಿನ ಜನಪ್ರತಿನಿಧಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಇದು ತಮ್ಮ ಸರ್ಕಾರದ ಒಬ್ಬ ಸಚಿವರನ್ನು ಜನರ ಟೀಕೆಯಿಂದ ರಕ್ಷಣೆ ಮಾಡುವ ಯತ್ನವಾಗಿದೆಯೇ ಹೊರತು ಜನರ ಮೇಲಿನ ಪ್ರೀತಿಯಿಂದಲ್ಲ. ಬಾಣೆ ಜಮೀನು ಹೊಂದಿರುವವರು ಈಗಾಗಲೇ ಆತಂಕಕ್ಕೊಳಗಾಗಿದ್ದು, ಖುದ್ದು ಕಂದಾಯ ಸಚಿವರೇ ಈ ಬಗ್ಗೆ ಬಹಿರಂಗ ಸ್ಪಷ್ಟೀಕರಣ ನೀಡಬೇಕು. ಕಂದಾಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಕೊಡಗಿನಲ್ಲಿ ವಿಶೇಷ ಸಭೆ ನಡೆಸಿ ಜನರ ಅಹವಾಲನ್ನು ಸ್ವೀಕರಿಸಬೇಕು ಎಂದು ವೀಣಾ ಅಚ್ಚಯ್ಯ ಆಗ್ರಹಿಸಿದರು.
::: ರಸ್ತೆಗಳ ಅಭಿವೃದ್ಧಿ ಪೂರ್ಣಗೊಳಿಸಿ :::
ಜಿಲ್ಲೆಯ ಬಹುತೇಕ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ, ಇನ್ನು ಕೇವಲ ಎರಡು ತಿಂಗಳಿನಲ್ಲಿ ಮಳೆಗಾಲ ಆರಂಭವಾಗುತ್ತದೆ. ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿ ಮರೀಚಿಕೆಯಾಗಿದೆ. ಇದೇ ಕಾರಣಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಚುನಾವಣೆ ಬಹಿಷ್ಕಾರದ ಕೂಗು ಕೇಳಿ ಬಂದಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೆ ಚುನಾವಣೆ ಬಹಿಷ್ಕಾರದ ಕೂಗು ಯಾಕೆ ಕೇಳಿ ಬರುತ್ತಿತ್ತು. ಕೊಡಗಿನ ಜನರನ್ನು ಸಮಾಧಾನ ಪಡಿಸುವ ಉದ್ದೇಶದಿಂದ ಬಜೆಟ್ ನಲ್ಲಿ 100 ಕೋಟಿ ರೂ. ಗಳನ್ನು ಘೋಷಿಸಿದಂತ್ತಿದೆ. ಕೇವಲ 100 ಕೋಟಿಗಳಲ್ಲಿ ಕೊಡಗಿನ ರಸ್ತೆಗಳ ಅಭಿವೃದ್ಧಿ ಸಾಧ್ಯವೇ. ಅಲ್ಪಪ್ರಮಾಣದ ಅನುದಾನವನ್ನು ಜಿಲ್ಲೆಯ ಶಾಸಕರುಗಳು ಯಾಕೆ ತಿರಸ್ಕರಿಸಲಿಲ್ಲ ಎಂದು ಪ್ರಶ್ನಿಸಿದರು.
ನಾವು ಅನುದಾನ ತಂದಿದ್ದೇವೆ ಎಂದು ಶಾಸಕರುಗಳು ಹೇಳಿಕೊಳ್ಳುತ್ತಿದ್ದಾರೆ, ಆದರೆ ಕೊಡಗು ಜಿಲ್ಲೆಗೆ ಯಾರೂ ಭಿಕ್ಷೆ ನೀಡುತ್ತಿಲ್ಲ, ನ್ಯಾಯಯುತವಾಗಿ ಸರ್ಕಾರದಿಂದ ಬರಬೇಕಾದ ಅನುದಾನ ಬರುತ್ತಿದೆಯಷ್ಟೆ. ಕೊಡಗಿನಲ್ಲಿ ಹುಟ್ಟುವ ಕಾವೇರಿ ನದಿಯಿಂದ ರಾಜ್ಯದ ಕೋಟ್ಯಾಂತರ ಜನರಿಗೆ ಲಾಭವಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಭಾರೀ ಪ್ರಭಾವ ಹೊಂದಿರುವ ಮಾಜಿ ಸ್ಪೀಕರ್, ಹಾಲಿ ಶಾಸಕರು ತಮ್ಮ ಪ್ರಭಾವ ಬಳಸಿ ಕೊಡಗಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಕಟ್ಟಡಗಳ ಕಾಮಗಾರಿ ಇನ್ನೂ ಕೂಡ ಪೂರ್ಣಗೊಳ್ಳದೆ ಅರ್ಧದಲ್ಲೇ ನಿಂತಿದೆ. ಕನ್ನಡ ಸುವರ್ಣ ಸಮುಚ್ಚಯ ಭವನ, ಕೊಡವ ಹೆರಿಟೇಜ್ ಕೇಂದ್ರ, ಹೆಚ್ಚುವರಿ ಹಾಸಿಗೆಗಳ ಆಸ್ಪತ್ರೆ, ಭಾಗಮಂಡಲದ ಮೇಲು ಸೇತುವೆ ಸೇರಿದಂತೆ ಹಲವು ಕಟ್ಟಡಗಳು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಶಾಸಕರುಗಳು ಹಾಗೂ ಸಂಸದರಿಗೆ ಇಚ್ಚಾಶಕ್ತಿಯ ಕೊರತೆ ಕಾಡುತ್ತಿದೆ. ಚುನಾವಣೆಗಳಲ್ಲಿ ಗೆಲುವು ಸಾಧಿಸುವುದಷ್ಟೇ ಇವರ ಅಜೆಂಡಾವಾಗಿದ್ದು, ಕೊಡಗಿನ ಜನರ ಹಿತ ಬೇಡವಾಗಿದೆ. ಜಿಲ್ಲಾಸ್ಪತ್ರೆಯ ಒಂದು ಕಾರ್ಯಕ್ರಮದಲ್ಲಿ ನಾನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬೇಡಿಕೆ ಇಟ್ಟಾಗ ಸಂಸದ ಪ್ರತಾಪ್ ಸಿಂಹ ಅವರು ನನಗೆ ಆಸ್ಪತ್ರೆ ಬಗ್ಗೆ ತಿಳಿದಿಲ್ಲವೆಂದು ಲೇವಡಿ ಮಾಡಿದ್ದರು. ಸಂಪೂರ್ಣ ಮಾಹಿತಿ ತಿಳಿದಿರುವ ಸಂಸದರು ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಯಾಕೆ ಬೇಡಿಕೆ ಇಡಲಿಲ್ಲವೆಂದು ಪ್ರಶ್ನಿಸಿದರು.
ಮೈಸೂರು- ಬೆಂಗಳೂರು ಹೆದ್ದಾರಿಗೆ ಕಾವೇರಿ ಮಾತೆಯ ಹೆಸರಿಡುವ ಕುರಿತು ಸಂಸದರು ಮಾಡಿರುವ ಶಿಫಾರಸ್ಸು ಸ್ವಾಗತಾರ್ಹವೆಂದರು.
ಕೊಡವ ಮತ್ತು ಅರೆಭಾಷಿಕರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿತ್ತು. ಬಜೆಟ್ ನಲ್ಲಿ ಘೋಷಿಸುವುದಾಗಿ ಮುಖ್ಯಮಂತ್ರಿಗಳು ನೀಡಿದ್ದ ಭರವಸೆ ಇದೀಗ ಹುಸಿಯಾಗಿದೆ. ವಿಧಾನ ಪರಿಷತ್ ನಲ್ಲಿ ನಾನು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇನೆ. ಆದರೆ ಕೊಡಗಿನ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲದ ಸಚಿವರುಗಳು ಅಧಿಕಾರಿಗಳು ನೀಡಿದ ವರದಿಯನ್ನು ಮಂಡಿಸುತ್ತಿದ್ದರೇ ಹೊರತು ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನೇ ಸೂಚಿಸಿಲ್ಲ. ವಿರೋಧ ಪಕ್ಷದ ಸದಸ್ಯರು ಮಾತನಾಡುವಾಗ ಆಡಳಿತ ಪಕ್ಷದವರು ನಿರ್ಲಕ್ಷ್ಯ ಮನೋಭಾವದಿಂದ ನೋಡುತ್ತಿದ್ದರು ಎಂದು ವೀಣಾ ಅಚ್ಚಯ್ಯ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಳಿಯಪ್ಪ, ಮಡಿಕೇರಿ ಬ್ಲಾಕ್ ಉಪಾಧ್ಯಕ್ಷ ಪ್ರಭು ರೈ, ಪ್ರಮುಖರಾದ ರವಿ ಗೌಡ ಹಾಗೂ ವೀಣಾ ಅಚ್ಚಯ್ಯರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*