ನಾಪೋಕ್ಲು ಮಾ.8 : ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರ್ ಕಲಾಡ್ಚ ವಾರ್ಷಿಕ ಉತ್ಸವವು ಸಾಂಪ್ರದಾಯಿಕವಾಗಿ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತು ಪೋರಾಟದೊಂದಿಗೆ ದೇವಾಲಯಕ್ಕೆ ತಲುಪಿ ಎತ್ತುಪೋರಾಟವನ್ನು ಒಪ್ಪಿಸಲಾಯಿತು. ನಂತರ ಭಕ್ತಾದಿಗಳಿಂದ ತುಲಾಭಾರ ಸೇವೆ ಸೇರಿದಂತೆ ಹಾಲು ಬಲಿವಾಡು ಹರಕೆ ಇನ್ನಿತರ ಪೂಜೆಗಳು ಜರುಗಿತು.
ಬಳಿಕ ಮಹಾಪೂಜೆ ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ, ಅನ್ನಸಂತರ್ಪಣೆ ನೆರವೇರಿತು.
ದೇವರ ಪ್ರಾರ್ಥನೆಯ ಬಳಿಕ ದೇವರ ನೃತ್ಯ ಬಲಿ ಜರುಗಿ ಎತ್ತು ಪೋರಾಟದೊಂದಿಗೆ ತಕ್ಕ ಮುಖ್ಯಸ್ಥರು ಭಕ್ತಾದಿಗಳು ಮಲ್ಮ ಬೆಟ್ಟಕ್ಕೆ ತೆರಳಿದರು. ಇದೇ ಸಂದರ್ಭ ಪೇರೂರು ಹಾಗೂ ನೆಲಜಿ ಇಗ್ಗುತ್ತಪ್ಪ ದೇವಾಲಯದ ತಕ್ಕ ಮುಖ್ಯಸ್ಥರು ಎತ್ತುಪೋರಾಟದೊಂದಿಗೆ ಮಲ್ಮಕ್ಕೆ ಆಗಮಿಸಿದರು. ಅರ್ಚಕರು ಶುದ್ದ ಕಲಶ ಪೂಜಾಕಾರ್ಯಗಳನ್ನು ನೆರವೇರಿಸಿ ಎತ್ತುಪೋರಾಟ ದುಡಿಕೊಟ್ಟ್ ಪಾಟ್ ನೆರವೇರಿತು.
ಬಳಿಕ ಎತ್ತುಪೋರಾಟದ ಅಕ್ಕಿಯನ್ನು ಮೂರು ಭಾಗಮಾಡಿ ನೆಲಜಿ, ಪೇರೂರು ಹಾಗೂ ಪಾಡಿ ದೇವಾಲಯದ ತಕ್ಕಮುಖ್ಯಸ್ಥರು ಹಂಚಿಕೊ0ಡು ದೇವರ ಕಟ್ಟು ಸಡಿಲಿಸಿ ನಾಡಿನ ಸುಭಿಕ್ಷಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಂಜೆ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಕಲಾಡ್ಚ ವಾರ್ಷಿಕ ಉತ್ಸವು ಸಂಪನ್ನಗೊಂಡಿತು.
ಹಬ್ಬದ ಪ್ರಯುಕ್ತ ದೇವಾಲಯವನ್ನು ವಿಶೇಷವಾಗಿ ವಿದ್ಯುತ್ ದೀಪ ಹಾಗೂ ಹೂವಿನಿಂದ ಅಲಂಕಾರಗೊಳಿಸಲಾಗಿತ್ತು.
ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಭಕ್ತಜನ ಸಂಘ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಊರಿನ ಪರ ಊರಿನ ಭಕ್ತಾದಿಗಳು, ಪಾಲ್ಗೊಂಡಿದ್ದರು.
ವರದಿ: ದುಗ್ಗಳ ಸದಾನಂದ