ಮಡಿಕೇರಿ ಮಾ.14 : ಕಂಡಕರೆ ಗಾಂಧಿ ಯುವಕ ಸಂಘದ ವತಿಯಿಂದ ಕೊಡಗು ಜಿಲ್ಲೆಯಲ್ಲೇ ಮೊದಲ ಬಾರಿಗೆ ಸರ್ವಧರ್ಮೀಯ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ಇದೇ ವರ್ಷ ನಡೆಯಲಿದ್ದು, ಇದರ ಪ್ರಚಾರ ಕಾರ್ಯಕಮದ ಪೋಸ್ಟರ್ ಬಿಡುಗಡೆಯನ್ನು ಮಾಜಿ ಸಚಿವ, ಶಾಸಕ, ಕರ್ನಾಟಕ ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ಹಾಗೂ ವಿರಾಜಪೇಟೆ ಅರಮೇರಿ ಶ್ರೀ ಕಳಂಚೇರಿ ಮಠದ ಮಠಾಧಿಪತಿ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ನಲ್ವತ್ತೇಕರೆಯಲ್ಲಿ ಪೀಪಲ್ಸ್ ವಿಲೇಜ್ ಮನೆ ಹಸ್ತಾಂತರ ಕಾರ್ಯಕ್ರಮದ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಗಾಂಧಿ ಯುವಕ ಸಂಘದ ವಿನೂತನ ಕಾರ್ಯಕ್ರಮಕ್ಕೆ ಶಾಸಕ ಯು.ಟಿ ಖಾದರ್ ಶುಭಕೋರಿ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಭರವಸೆ ನೀಡಿದರು.
ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಗಾಂಧಿ ಯುವಕ ಸಂಘದ ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಕಾಂಗ್ರೆಸ್ ಯುವ ಮುಖಂಡ ಡಾ.ಮಂಥರ್ ಗೌಡ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್, ಅಜೀಜ್ ನೆಲ್ಲಿಹುದಿಕೇರಿ, ನೆಲ್ಲಿಹುದಿಕೇರಿ ಗ್ರಾ.ಪಂ ಅಧ್ಯಕ್ಷ ಹಕೀಂ, ಮಾಜಿ ಜಿ.ಪಂ ಸದಸ್ಯರಾದ ಸುನಿತಾ ಮಂಜುನಾಥ್, ಗಾಂಧಿ ಯುವಕ ಸಂಘದ ಸಂಸ್ಥಾಪಕ ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಕಾರ್ಯದರ್ಶಿ ಉನೈಸ್ ಕೆ.ಎಂ, ಅಬ್ದುರಹಮಾನ್ ವಿರಾಜಪೇಟೆ, ಹಾಗೂ ಜಮಾಹತೇ ಇಸ್ಲಾಮಿ ಹಿಂದ್ ಸದಸ್ಯರು ಇದ್ದರು.