ಮಡಿಕೇರಿ ಮಾ.16 : ಕೊಡವ ಕುಟುಂಬಗಳ ನಡುವಿನ 23ನೇ ವರ್ಷದ ‘ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವ-2023’ ಕ್ಕೆ ಮಾ.18 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಯಶಸ್ವಿ ಪಂದ್ಯಾವಳಿಗಾಗಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಹಾಕಿ ಉತ್ಸವ ಸಮಿತಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಕಿ ಉತ್ಸವದ ಉದ್ಘಾಟನಾ ಸಮಾರಂಭ ಮಧ್ಯಾಹ್ನ 2.20 ಗಂಟೆಗೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಕ್ರೀಡಾ ಸಚಿವ ಡಾ.ಕೆ.ಸಿ. ನಾರಾಯಣ ಗೌಡ, ಸಂಸದ ಪ್ರತಾಪಸಿಂಹ, ಜಿಲ್ಲೆಯ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್ ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳ್ಳಲಿದ್ದಾರೆ. ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೆದಾರರಾದ ಅಪ್ಪಚೆಟ್ಟೋಳಂಡ ಈರಪ್ಪ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದರು.
ಉದ್ಘಾಟನಾ ದಿನದಂದು ಬೆಳಗ್ಗೆ ನಾಪೋಕ್ಲುವಿನಲ್ಲಿ ಆಕರ್ಷಕ ಬೃಹತ್ ಮೆರವಣಿಗೆ ನಡೆಯಲಿದೆ. ಹಾಕಿ ಉತ್ಸವವನ್ನು ಮೊಟ್ಟ ಮೊದಲು ಆಯೋಜಿಸಿದ ಪಾಂಡಂಡ ಕುಟುಂಬ ಸೇರಿದಂತೆ ಇಲ್ಲಿಯವರೆಗೆ ಪಂದ್ಯಾವಳಿ ಆಯೋಜಿಸಿದ ಕೊಡವ ಕುಟುಂಬಗಳ 23 ಮಂದಿ ಪ್ರತಿನಿಧಿಗಳು ಆಕಾಶಕ್ಕೆ ಗುಂಡು ಹಾರಿಸುವ ಮೂಲಕ ಪಂದ್ಯಾವಳಿಗೆ ಸಾಂಪ್ರದಾಯಿಕ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕರ್ನಾಟಕದ ವಿವಿಧ ಕಲಾ ತಂಡಗಳು ಪಾಲ್ಗೊಂಡು ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸಲಿದ್ದಾರೆ. ಇದೇ ಸಂದರ್ಭ ಬೆಳಗ್ಗೆ 11.15 ಗಂಟೆಗೆ ಕೊಡವ ಹಾಕಿ ಅಕಾಡೆಮಿ ಮತ್ತು ಅಪ್ಪಚೆಟ್ಟೋಳಂಡ ಹಾಕಿ ಉತ್ಸವದ ಧ್ವಜಾರೋಹಣ ನೆರವೇರಲಿದೆ. ಬೆಳಗ್ಗೆ 11.30 ಗಂಟೆಗೆ 37ನೇ ಕೂರ್ಗ್ ಫೀಲ್ಡ್ ರೆಜಿಮೆಂಟ್ ತಂಡ ಮತ್ತು ಕೊಡವ ಅಕಾಡೆಮಿ ಇಲೆವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಮುಖ್ಯ ಮಂತ್ರಿಗಳಿಂದ ಪಂದ್ಯಾವಳಿ ಉದ್ಘಾಟನೆಯಾದ ಬಳಿಕ ಇಂಡಿಯಾ ಜೂನಿಯರ್ ಇಲೆವೆನ್ ಮತ್ತು ಕರ್ನಾಟಕ ಇಲೆವೆನ್ ತಂಡಗಳ ನಡುವೆ ಮತ್ತೊಂದು ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿದೆ.
::: ದಾಖಲೆಯ 336 ತಂಡಗಳು :::
ಈ ಬಾರಿಯ ಪಂದ್ಯಾವಳಿಯಲ್ಲಿ ದಾಖಲೆಯ 336 ತಂಡಗಳು ಪಾಲ್ಗೊಳ್ಳಲಿವೆ. ಇದೊಂದು ದಾಖಲೆಯೇ ಆಗಿದೆಯೆಂದು ತಿಳಿಸಿದ ಅವರು, ಒಟ್ಟು ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿನಿತ್ಯ ಮೂರು ಮೈದಾನಗಳಲ್ಲಿ 21 ಪಂದ್ಯಗಳು ನಡೆಯಲಿವೆ. ಪ್ರೀ ಕ್ವಾರ್ಟರ್ ಪಂದ್ಯಗಳ ಬಳಿಕ ಪ್ರಮುಖ ಮೈದಾನ ಒಂದರಲ್ಲೆ ಪಂದ್ಯಗಳನ್ನು ಆಯೋಜಿಸಲಾಗಿದೆ. ಪಂದ್ಯಾವಳಿ ವೀಕ್ಷಣೆಗೆ 25 ಸಾವಿರ ಆಸನ ವ್ಯವಸ್ಥೆಯುಳ್ಳ ಗ್ಯಾಲರಿ ನಿರ್ಮಿಸಲಾಗಿದೆ. ಇದರಲ್ಲಿ 1300 ವಿಐಪಿ ಆಸನಗಳನ್ನು ಸಜ್ಜುಗೊಳಿಸಲಾಗಿದ್ದು, 23 ದಿನಗಳ ಕಾಲ ಪಂದ್ಯಾವಳಿ ಹಾಕಿ ಪ್ರೇಮಿಗಳನ್ನು ತನ್ನೆಡೆಗೆ ಸೆಳೆಯಲಿದೆಯೆಂದು ಮನು ಮುತ್ತಪ್ಪ ಮಾಹಿತಿ ನೀಡಿದರು.
ಹಾಕಿ ಪಂದ್ಯಗಳ ಮಾಹಿತಿ, ಉತ್ಸವದ ವಿವರಗಳನ್ನು ಜನರಿಗೆ ತಲುಪಿಸಲು www.appachettolanda.com ವೆಬ್ ಆರಂಭಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪ್ಪಚೆಟ್ಟೋಳಂಡ ಹಾಕಿ ಉತ್ಸವ ಸಮಿತಿಯ ಸದಸ್ಯರಾದ ಎ.ಕೆ. ತಿಮ್ಮಯ್ಯ, ಪ್ರತಿಮಾ ಪೊನ್ನಪ್ಪ, ರೀನಾ ಪೂವಯ್ಯ, ಡೇನ್ ಪೂವಯ್ಯ ಹಾಗೂ ಮೋನಿಷ ಮುತ್ತಪ್ಪ ಉಪಸ್ಥಿತರಿದ್ದರು.
Breaking News
- *ಕೊಡಗು : ಡಿ.1 ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಆರಂಭ : ಜಿಲ್ಲಾಧಿಕಾರಿ ವೆಂಕಟ್ ರಾಜಾ*
- *ಪಡಿತರ ಚೀಟಿ ಪರಿಷ್ಕರಣೆ : ಅರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ : ಸಚಿವ ಮುನಿಯಪ್ಪ*
- *ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7ನೇ ವಾಷಿ೯ಕೋತ್ಸವ : ಜೀವ ಉಳಿಸುವ ರಕ್ತದಾನಿಗಳೇ ನಿಜವಾದ ಹೀರೋಗಳು : ಅನಿಲ್ ಹೆಚ್.ಟಿ.*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ : ಜಾನ್ಸನ್ ಪಿಂಟೋ ಸೇರಿ ಹಲವರು ಕಣದಲ್ಲಿ*
- *ಕಲ್ಲು ಬಾಯ್ಸ್ ಲೈಕ್ಸ್ ಫ್ಯಾಶನ್ ಫುಟ್ಬಾಲ್ ಕಪ್ : ನಿಯೋನ್ ಎಫ್.ಸಿ ಅಮ್ಮತ್ತಿ ಚಾಂಪಿಯನ್*
- *ಗ್ರಾ.ಪಂ ಉಪಚುನಾವಣೆ : ಕೊಡಗಿನ ವಿವಿಧೆಡೆ ಮದ್ಯ ಮಾರಾಟ ನಿಷೇಧ*
- *ನಂದಿನಿ ವಿವಿಧ ಶ್ರೇಣಿಯ ಹಾಲು ಬಿಡುಗಡೆ : ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಕಟ್ಟೆಹಾಡಿ ಅರಣ್ಯ ಹಕ್ಕು ಸಮಿತಿ ರಚನೆ : ಆದಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಆಗ್ರಹ*
- *ನ.29 ರಂದು ವಾಲ್ನೂರು-ತ್ಯಾಗತ್ತೂರು ಗ್ರಾಮ ಸಭೆ*
- *ಕೊಡಗು : ಗ್ರಾ.ಪಂ.ಉಪಚುನಾವಣೆ : ವಿವಿಧ ಸಂತೆ, ಜಾತ್ರೆಗಳ ನಿಷೇಧ*