ಮಡಿಕೇರಿ ಮಾ.17 : ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ಅರಣ್ಯ ಇಲಾಖೆ ವತಿಯಿಂದ ಕೊಡಗು ಜಿಲ್ಲೆಯ ಹಾರಂಗಿಯಲ್ಲಿ ಉದ್ದೇಶಿತ ‘ಜೀವ ವೈವಿಧ್ಯ ಔಷಧ ಉದ್ಯಾನ’ ನಿರ್ಮಾಣ ಕಾರ್ಯಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೂಮಿ ಪೂಜೆ ನೆರವೇರಿಸಿದರು.
ಹಾರಂಗಿ ವೃಕ್ಷೋದ್ಯಾನವನ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ಫಲಕ ಅನಾವರಣಗೊಳಿಸಿ, ಸಾಂಕೇತಿಕವಾಗಿ ಔಷಧಿಯ ಗಿಡಗಳನ್ನು ನೆಡುವ ಮೂಲಕ ಉದ್ದೇಶಿತ ಯೋಜನೆಗೆ ಚಾಲನೆ ನೀಡಿದರು.
ಔಷಧೀಯ ಸಸ್ಯಗಳನ್ನು ಬೆಳೆಸಿ, ಅವುಗಳ ಮಹತ್ವವನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ತಿಳಿಸುವ ನಿಟ್ಟಿನಲ್ಲಿ 2.5 ಹೆಕ್ಟೇರ್ ಪ್ರದೇಶದಲ್ಲಿ ‘ಜೀವ ವೈವಿಧ್ಯ ಔಷಧ ಉದ್ಯಾನ’ ನಿರ್ಮಿಸಲು ಮಂಡಳಿ ಮುಂದಾಗಿದೆ.
ಚಾಲನೆ ನೀಡಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಪ್ಪಚ್ಚು ರಂಜನ್ ಅವರು ಔಷಧ ಉದ್ಯಾನ ನಿರ್ಮಾಣಕ್ಕೆ ಹಾರಂಗಿ ಉತ್ತಮ ಜಾಗ. ಔಷಧಿ ಸಸ್ಯಗಳನ್ನು ಉಳಿಸುವ ಕಾರ್ಯ ನಿರಂತರವಾಗಿ ಆಗಬೇಕು. ನಮ್ಮ ಪರಿಸರ ಉಳಿದರೆ ಮಾತ್ರ ಜೀವರಾಶಿಗಳು ಬದುಕಲು ಸಾಧ್ಯ ಎಂದರು.
ಭಾರತೀಯರು ಪ್ರಕೃತಿ ಆರಾಧಕರು. ಈ ಮೊದಲೆಲ್ಲ ವಿದೇಶಿಗರು ನಮ್ಮ ಸಂಸ್ಕøತಿಯನ್ನು ಲೇವಡಿ ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಪ್ರಕೃತಿ ಆರಾಧನೆಯ ಮಹತ್ವ ವಿದೇಶಿಗರಿಗೆ ಅರಿವಾಗಿದೆ. ಕೊಡಗಿನಲ್ಲಿ ಪ್ರತಿ ಊರಿನಲ್ಲೂ ದೇವರ ಕಾಡುಗಳು ಇವೆ. ಹಿಂದಿನಿಂದಲೂ ಆ ಕಾಡುಗಳನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಈ ಕಾಡುಗಳಲ್ಲೂ ಅಪಾರ ಔಷಧೀಯ ಗಿಡಗಳು, ಜೀವ ವೈವಿಧ್ಯಗಳಿವೆ ಎಂದು ತಿಳಿಸಿದರು.
ಮುಂದುವರೆದ ರಾಷ್ಟ್ರಗಳು ಆಯುರ್ವೇದ ಔಷಧಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಭಾರತದಿಂದ ಹೇರಳ ಪ್ರಮಾಣದಲ್ಲಿ ಆಯುರ್ವೇದ ಔಷಧಿ ವಿದೇಶಕ್ಕೆ ರಫ್ತಾಗುತ್ತಿವೆ. ಆಯುರ್ವೇದಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ಹೀಗಾಗಿ ನಮ್ಮ ಪಾರಂಪರಿಕ ಔಷಧಗಳತ್ತ ನಾವು ಕೂಡಾ ಒಲವು ಹೊಂದಬೇಕು. ಔಷಧಿ ಗಿಡಮೂಲಿಕೆಗಳ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ಕಾರ್ಯವನ್ನು ಅರಿತವರು ಮಾಡಬೇಕು. ಪಶ್ಚಿಮಘಟ್ಟ ಪ್ರದೇಶದ ನದಿಮೂಲಗಳ ಸಂರಕ್ಷಣೆಗೂ ಎಲ್ಲರು ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಕೊಡಗಿನಲ್ಲಿ ಔಷಧೀಯ ಸಸ್ಯಗಳ ಉದ್ಯಾನ ಮಾಡಬೇಕೆಂದು ಈ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು ಆಶಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು, ಈಗ ಕಾರ್ಯರೂಪಕ್ಕೆ ತರಲಾಗುತ್ತಿದೆ. ನಮ್ಮಲ್ಲಿರುವ ಔಷಧ ಸಸ್ಯಗಳು ಹಾಗೂ ಅವುಗಳ ಮಹತ್ವದ ಬಗ್ಗೆ ನಮಗೆ ತಿಳಿದಿಲ್ಲ. ಔಷಧೀಯ ಸಸ್ಯ ಸಂಪತ್ತಿನ ಬಗ್ಗೆ ಜನರಿಗೆ ತಿಳಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದರು.
ಹಾರಂಗಿ ಜಲಾಶಯ, ಆನೆ ಶಿಬಿರ, ವೃಕ್ಷೋದ್ಯಾನಕ್ಕೆ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ. ಮುಂದಿನ ದಿನದಲ್ಲಿ ಔಷಧ ಉದ್ಯಾನ ಆದ ಬಳಿಕ ಪ್ರವಾಸಿಗರು ಅದರ ಲಾಭವನ್ನೂ ಪಡೆಯಬಹುದು. ಉದ್ಯಾನ ನಿರ್ಮಾಣದ ಬಳಿಕ ಅದರ ನಿರ್ವಹಣೆ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಸ್ಥಳೀಯ ಪಂಚಾಯಿತಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಗಮನ ಸೆಳೆದರು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಔಷಧಿಯ ಉದ್ಯಾನ ನಿರ್ಮಾಣಕ್ಕೆ ಯೋಜನೆ ಜಾರಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಮಾತನಾಡಿದ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ, ಪ್ರಪಂಚದಲ್ಲಿ ಒಟ್ಟು 12 ಜೀವ ವೈವಿಧ್ಯದ ಹಾಟ್ ಸ್ಪಾಟ್‍ಗಳಿವೆ. ಅವುಗಳಲ್ಲಿ ಎರಡು ಭಾರತದಲ್ಲಿದ್ದು, ಪಶ್ಚಿಮ ಘಟ್ಟ ಪ್ರದೇಶ ಅವುಗಳಲ್ಲಿ ಒಂದಾಗಿದೆ. ಹಲವು ಬಗೆಯ ಔಷಧೀಯ ಸಸ್ಯಗಳು ಪಶ್ಚಿಮ ಘಟ್ಟ ಪ್ರದೇಶದಲ್ಲಿದೆ. ಪಶ್ಚಿಮ ಘಟ್ಟ ಮತ್ತು ಹಿಮಾಲಯ ಇಲ್ಲದಿದ್ದರೆ ಭಾರತ ಬರಡು ಪ್ರದೇಶವಾಗಿರುತ್ತಿತ್ತು ಎಂದರು.
ಅಭಿವೃದ್ಧಿ ಹಾಗೂ ಪರಿಸರ ಸಮತೋಲನದಿಂದ ಸಾಗಬೇಕು. ಕೊಂಚ ಏರುಪೇರಾದರೂ ಅದರ ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ. ಹಾರಂಗಿಯಲ್ಲಿ ನಿರ್ಮಾಣವಾಗಲಿರುವ ‘ಜೀವ ವೈವಿಧ್ಯ ಔಷಧ ಉದ್ಯಾನ’ದಲ್ಲಿ ಮುಂದಿನ ಮುಂಗಾರು ಆರಂಭದಿಂದ ಸಸ್ಯಗಳನ್ನು ನೆಡಲು ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು.
ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷರಾದ ಇಂದಿರಾ ರಮೇಶ್, ಜೀವ ವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಅನಿತಾ ಎಸ್. ಅರೇಕಲ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಂ ಬಾಬು, ಶರಣಬಸಪ್ಪ, ಎಂ.ಜೆ.ಗೋವರ್ಧನ್ ಸಿಂಗ್, ಮಡಿಕೇರಿ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಹ್ಮಣಿ, ಲ್ಯಾಂಪ್ಸ್ ಅಧ್ಯಕ್ಷರಾ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಅತಿಥಿಗಳು ಸ್ಥಳೀಯ ಶಿಬಿರದ ಆನೆಗಳಿಗೆ ಬಾಳೆಹಣ್ಣು, ಕಬ್ಬು, ಬೆಲ್ಲ ನೀಡಿದರು. ಅಕ್ಷತಾ ಪ್ರಾರ್ಥಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಸ್ವಾಗತಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ ವಂದಿಸಿದರು. ಪ್ರಸನ್ನ ನಿರೂಪಿಸಿದರು.
Breaking News
- *ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ*
- *ಅಂತರಾಷ್ಟ್ರೀಯ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ಅಲುಫ್ ಎ.ಆರ್ ಚಾಂಪಿಯನ್*
- *ಮಡಿಕೇರಿಯಲ್ಲಿ ತಂಬಾಕು ಮುಕ್ತ ಯುವ ಅಭಿಯಾನ : ರಾಷ್ಟ್ರದ ಸದೃಢತೆಗೆ ಯುವಜನರು ಕೈಜೋಡಿಸಿ: ಸಿವಿಲ್ ನ್ಯಾಯಾಧೀಶೆ ಶುಭ*
- *ಮಡಿಕೇರಿಯಲ್ಲಿ ಡಾ.ಅಖಿಲ್ ಕುಟ್ಟಪ್ಪ – ಅಶ್ವಥ್ ಅಯ್ಯಪ್ಪ ಸ್ಮರಣಾಥ೯ ಕ್ರಿಕೆಟ್ ಪಂದ್ಯಾವಳಿ : ಸಾಧಕ ಕ್ರೀಡಾಪಟುಗಳಾಗುವತ್ತ ಚಿತ್ತ ಹರಿಸಿ : ನಿವೃತ್ತ ಏರ್ ಮಾಷ೯ಲ್ ಕಾಯ೯ಪ್ಪ ಕರೆ*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ*
- *ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿದ ಹರಪಳ್ಳಿ ರವೀಂದ್ರ*
- *ಕೂಡಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ : ಆಟೋ ಚಾಲಕರು ಕನ್ನಡ ನಾಡು-ನುಡಿಯ ರಾಯಭಾರಿಗಳು : ವಿ.ಪಿ.ಶಶಿಧರ್ ಬಣ್ಣನೆ*
- *ಗೋಣಿಕೊಪ್ಪ : ಮನಸ್ಸು ಮತ್ತು ಮನೆಯಿಂದಲೇ ಭ್ರಷ್ಟಾಚಾರ ಪ್ರಾರಂಭ : ಡಾ.ಕೆ.ಬಸವರಾಜು*
- *ಶಾಸಕ ಎ.ಎಸ್.ಪೊನ್ನಣ್ಣ ರಿಗೆ ವಿಧಾನಸಭಾಧ್ಯಕ್ಷರ ಕಚೇರಿಯಿಂದ ಕೊಡುಗೆ*
- *ಜಿಲ್ಲಾ ಮಟ್ಟದ ಚಾಂಪಿಯನ್ಶಿಪ್ನಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ*