ಮಡಿಕೇರಿ ಮಾ.17 : ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದರೂ ಕೊಡಗಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಿಜೆಪಿ ಪ್ರತಿನಿಧಿಗಳು ವಿಫರಾಗಿರುವುದರಿಂದ ಭ್ರಮನಿರಸನಗೊಂಡಿರುವ ಜನ ಈ ಬಾರಿ ಬದಲಾವಣೆಯನ್ನು ಬಯಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಯಿಂದ ಹಿಡಿದು ಕೇಂದ್ರದವರೆಗೆ ಬಿಜೆಪಿ ಅಧಿಕಾರದಲ್ಲಿರುವುದಲ್ಲದೆ, ಜಿಲ್ಲೆಯ ಎರಡು ಕ್ಷೇತ್ರಗಳಲ್ಲು ಬಿಜೆಪಿ ಶಾಸಕರಿದ್ದಾರೆ. ಹೀಗಿದ್ದೂ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಇವರುಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಕೊಡಗಿನ ಪ್ರಮುಖ ಕೃಷಿಯಾಗಿರುವ ಕಾಫಿ ವಾಣಿಜ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಕೃಷಿಗೆ ಸಂಬಂಧ ಪಟ್ಟಂತೆ ಸೂಕ್ತ ಆಮದು ನೀತಿಯನ್ನು ರೂಪಿಸುವುದು ಸೇರಿದಂತೆ ಯಾವುದೇ ಗಂಭೀರ ವಿಚಾರಗಳ ಬಗ್ಗೆ ಬಿಜೆಪಿ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸೋತಿದೆಯೆಂದು ಆರೋಪಿಸಿದ ಅವರು, ಜಿಲ್ಲೆಯಲ್ಲಿ ದಿನೇ ದಿನೇ ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷ ಹೆಚ್ಚುತ್ತಿದೆಯಾದರು ಇದಕ್ಕೆ ವೈಜ್ಞಾನಿಕವಾದ ಶಾಶ್ವತ ಪರಿಹಾರ ರೂಪಿಸುವಲ್ಲಿ ಬಿಜೆಪಿ ವಿಫಲವಾಗಿದೆಯೆಂದು ಹೇಳಿದರು.
ವನ್ಯಜೀವಿಗಳ ಹಾವಳಿ ಸೇರಿದಂತೆ ಅರಣ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಜಿಲ್ಲೆಯನ್ನು ಕಾಡಿದೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರೇ ಇಲ್ಲವೆಂದು ವ್ಯಂಗ್ಯವಾಡಿದರು.
ಇತ್ತೀಚೆಗೆ ಹುಲಿದಾಳಿಯಿಂದ ಇಬ್ಬರು ಬಲಿಯಾಗಿದ್ದಾರೆ, ಕನಿಷ್ಟ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗುವ ಕಾಳಜಿಯನ್ನು ಕೂಡ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಸಂಸದರು ತೋರಲಿಲ್ಲ ಎಂದು ಟೀಕಿಸಿದರು.
ಬಿಜೆಪಿಯಿಂದ ನಡೆದ ವಿಜಯ ಸಂಕಲ್ಪ ಯಾತ್ರೆಗೆ ಆ ಪಕ್ಷದ ಪ್ರಮುಖರಾದ ಬಿ.ಎಸ್.ಯಡಿಯೂರಪ್ಪ ಅವರು ಬಂದಿಲ್ಲ. ಸೋಲುವ ಕ್ಷೇತ್ರಕ್ಕೆ ಅವರು ಬರುವುದಿಲ್ಲ. ಡಬಲ್ ಇಂಜಿನ್ ಸರ್ಕಾರವೆಂದು ಬಿಜೆಪಿ ಕರೆದುಕೊಳ್ಳುತ್ತಿದೆ, ಆದರೆ ಡಬಲ್ ಹೋಗಲಿ ಸಿಂಗಲ್ ಇಂಜಿನ್ ಸಹ ಸರ್ಕಾರಕ್ಕೆ ಇಲ್ಲ. ಇದರ ನಾಲ್ಕು ಟಯರ್‍ಗಳು ಪಂಚರ್ ಆಗಿವೆ ಎಂದು ಲೇವಡಿ ಮಾಡಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸುರಯ್ಯ ಅಬ್ರಾರ್ ಮಾತನಾಡಿ, ಬಿಜೆಪಿ ಸುಳ್ಳನ್ನೆ ನಿಜವೆಂದು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಾ ಬರುತ್ತಿದೆ, ಕಾಂಗ್ರೆಸ್ ಅವಧಿಯಲ್ಲಿ ಜಿಲ್ಲೆಯ ಮಹಿಳೆಯರಿಗೆ ಪಕ್ಷ ಅಗತ್ಯ ಸ್ಥಾನಮಾನಗಳನ್ನು ನೀಡಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಯಾವುದೇ ಅವಕಾಶ ನೀಡಿಲ್ಲ. ಇದನ್ನು ಜಿಲ್ಲೆಯ ಮಹಿಳಾ ಮತದಾರರು ಅರಿತುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಮಾತನಾಡಿ, ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದ ಸಂದರ್ಭ ಪಕ್ಷದ ಪ್ರಣಾಳಿಕೆಯ ಆಶ್ವಾಸನೆಗಳನ್ನು ಈಡೇರಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ಏನನ್ನು ಪೂರೈಸಿದ್ದಾರೆಂದು ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಜಯೇಂದ್ರ ಬಿ.ಇ. ಅವರು ಮಾತನಾಡಿ, ಗೋಣಿಕೊಪ್ಪಲಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭ ಅಂಬೇಡ್ಕರ್ ಭಾವಚಿತ್ರದ ಮೇಲೆ ಅವಮಾನಿಸುವ ರೀತಿಯಲ್ಲಿ ಮುಖ್ಯಮಂತ್ರಿಗಳ ಭಿತ್ತಿಪತ್ರ ಅಂಟಿಸಿ ಅವಮಾನಿಸಲಾಗಿದೆ. ಈ ಬಗ್ಗೆ ಮಾ.19 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್ ಉಪಸ್ಥಿತರಿದ್ದರು.









