ಮಡಿಕೇರಿ ಮಾ.21 : ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೊಡಗು ಜಿಲ್ಲೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕೊಡಗು ಜಿಲ್ಲೆ, ಮೆಕ್‌ಗಿಲ್ ವಿಶ್ವವಿದ್ಯಾನಿಲಯ ಕೆನಡಾ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಡಗು ಶಾಖೆ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಮಡಿಕೇರಿಯ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಸಭಾಂಗಣದಲ್ಲಿ “ವಿಪತ್ತು ನಿರ್ವಹಣೆಯಲ್ಲಿ ವಿಶೇಷಚೇತನರ ಅವಶ್ಯಕತೆಗಳ ಅಳವಡಿಕೆಯ” ವಿಷಯದ ಕುರಿತಂತೆ ಜಿಲ್ಲಾ ಮಟ್ಟದ ಪ್ರಸರಣ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು 2018 ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ವಿಪತ್ತು ಹಾಗೂ ಪ್ರವಾಹದ ಅನುಭವಗಳ ಕುರಿತಾದ ಮಾಹಿತಿಯನ್ನು ಹಂಚಿಕೊಂಡರು. 2018 ಆಗಸ್ಟ್ ಮಾಹೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದ ಅನುಭವಗಳ ಕುರಿತಾಗಿ ಹಾಗೂ ವಿಪತ್ತು ನಿರ್ವಹಣೆ ಯೋಜನೆಗೆ ನಿಯೋಜನೆಗೊಂಡಿದ್ದ ಎನ್.ಡಿ.ಆರ್.ಎಫ್ ತಂಡಗಳ ಕಾರ್ಯ ವೈಕರಿಗಳ ಕುರಿತಾಗಿ ಸಂಕ್ಷಿಪ್ತ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವ್ಯವಸ್ಥಾಪನ ಸಮಿತಿ ಸದಸ್ಯ ಕೆ.ಕೆ.ವಿಶ್ವನಾಥ್ , ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದ ಅನುಭವಗಳು ಕುರಿತಾಗಿ ವಿಪತ್ತು ನಿರ್ವಹಣೆಯಲ್ಲಿ ವಿಶೇಷ ಚೇತನರ ಅವಶ್ಯಕತೆಗಳ ಅಳವಡಿಕೆ ಎಂಬ ಜಿಲ್ಲಾ ಮಟ್ಟದ ಪ್ರಸರಣ ಕಾರ್ಯಾಗಾರವನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ ಪ್ರವಾಹದ ಸಂದರ್ಭದಲ್ಲಿ ವಿಶೇಷಚೇತನರು ಅನುಭವಿಸಿದ ಘಟನೆಯ ಕುರಿತಾಗಿ ಮಾಹಿತಿ ಪಡೆದುಕೊಂಡು ಅಧ್ಯಯನ ಮಾಡಿರುವುದು ಸಂತಸದ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಸಭಾಪತಿ ರವೀಂದ್ರ ರೈ, ಕೊಡಗು ಜಿಲ್ಲಾ ವಿಕಲ ಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಯೋಜನಾ ಸಹಾಯಕ ರಾಜ್ ಕುಮಾರ್, ಸುಂಟಿಕೊಪ್ಪ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ, ಕೆನಡಾ ಮೆಕ್‌ಗಿಲ್ ವಿಶ್ವವಿದ್ಯಾನಿಲಯದ ಮ್ಯಾಥ್ಯೂ ಸೀಮರ್ಡ್, ಕೊಡಗು ಜಿಲ್ಲಾ ವಿಶೇಷಚೇತನರ ಸಂಘದ ಅಧ್ಯಕ್ಷ ಮಹೇಶ್ವರ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಡಾ. ಸೀತಾರಾಂ ಎಂ. ಆರ್., ಡಾ. ಶೃತಿ, ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.