ಮಡಿಕೇರಿ ಮಾ.21 : ಗೋಣಿಕೊಪ್ಪದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವಿರುವ ಪೋಸ್ಟರ್ ಮೇಲೆ ಚಪ್ಪಲಿ ಚಿತ್ರವನ್ನಿಟ್ಟು ಅವಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕ ಆಗ್ರಹಿಸಿದೆ.
ತಿತಿಮತಿಯ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಮಾನವ ಸರಪಳಿ ರಚಿಸಿ ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದರು.
ಬಿಜೆಪಿ ವತಿಯಿಂದ ಗೋಣಿಕೊಪ್ಪದಲ್ಲಿ ಆಯೋಜಿಸಿದ್ದ ವಿಜಯಸಂಕಲ್ಪ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರವಿರುವ ಪೋಸ್ಟರ್ ಮೇಲೆ ಮುಖ್ಯಮಂತ್ರಿಯವರ ಭಾವಚಿತ್ರದ ಪೋಸ್ಟರ್ ಅಳವಡಿಸಿ, ಅವರ ಕಾಲಿನ ಚಪ್ಪಲಿ, ಅಂಬೇಡ್ಕರ್ ಚಿತ್ರದ ತಲೆಯ ಮೇಲೆ ಇರುವಂತೆ ವ್ಯವಸ್ಥಿತವಾಗಿ ಕಟ್ಟಿದ್ದಾರೆ. ಬಿಜೆಪಿ, ಸಂಘಪರಿವಾರದ ಕಿಡಿಕೇಡಿಗಳ ಮನಸ್ಥಿತಿ ಇಂತಹ ಕೃತ್ಯಗಳಿಂದ ತಿಳಿದು ಬರುತ್ತದೆ ಎಂದು ದೂರಿದರು.
ಈ ವಿಷಯವಾಗಿ ಗೋಣಿಕೊಪ್ಪ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಇದುವರೆಗೂ ಬಂದಿಸಿರುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ, ಗಡಿಪಾರು ಮಾಡುವಂತೆ ಸಂಘಟನೆಯ ಪ್ರಮುಖರು ಒತ್ತಾಯಿಸಿದರು.
ಕಳೆದ 6 ವರ್ಷದಿಂದ ಹೈಸೂಡ್ಲುರು ಗ್ರಾಮದಲ್ಲಿ ಪರಿಶಿಷ್ಟ ಪಂಗಡ ನಿವಾಸಿಗಳಿಗೆ ಆಶ್ರಯ ನಿವೇಶನಕ್ಕಾಗಿ ಪೊನ್ನಂಪೇಟೆ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಯವರ ಹೆಸರಿನಲ್ಲಿ ಮಿಸಲಿರಿಸಿದ್ದ 8 ಎಕರೆ ಜಾಗದಲ್ಲಿ 7 ಎಕರೆ ಜಾಗವನ್ನು ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದು, ಉಳಿದ 1 ಎಕರೆ ಜಾಗದಲ್ಲಿ ಜೇನು ಕುರುಬ, ಯರವ, ಜನಾಂಗದವರು, ನಿವೇಶನ ರಹಿತರು, ಪ್ಲಾಸ್ಟಿಕ್ ಗುಡಿಸಲು ಕಟ್ಟಿಕೊಂಡು ವಾಸವಿದ್ದಾರೆ.
ಅಲ್ಲದೆ ಕುಡಿಯಲು ನೀರಿಲ್ಲದೆ ಸುಮಾರು 6-7 ಕಿಲೋ ಮೀಟರ್ ದೂರದ ಹೊಳೆಯಿಂದ ನೀರು ತರುವ ಪರಿಸ್ಥಿತಿ ಉದ್ಭವವಾಗಿದ್ದು, ಕಳೆದ 6 ವರ್ಷಗಳಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಜೀವನ ನಡೆಸುತ್ತಿದ್ದಾರೆ. ಇಲ್ಲಿ ವಾಸ ಮಾಡುತ್ತಿರುವ ನಿವಾಸಿಗಳು ಮೂಲಭೂತ ಸೌಲಭ್ಯಗಳಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಸಮಿತಿಯ ಪ್ರಮುಖರು ಅಧಿಕಾರಿಗಳು ಉಳ್ಳವರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಪರಿಶಿಷ್ಟ ಪಂಗಡದವರಿಗಾಗಿ ಮೀಸಲಿಟ್ಟ ಜಾಗವನ್ನು ಸರ್ವೆ ನಡೆಸಿ ಸರ್ಕಾರ ಸುಪರ್ದಿಗೆ ಪಡೆದುಕೊಂಡು ಬಡವರಿಗೆ ಹಂಚಿಕೆ ಮಾಡದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರ ಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಬೇಡಿಕೆಗಳು:
ಹೈಸೂಡ್ಲುರು ಗ್ರಾಮದಲ್ಲಿ ವಾಸವಿರುವವರಿಗೆ ಮೂಲಭೂತ ಸೌಲಭ್ಯ ಹಾಗೂ ಕುಡಿಯುವ ನೀರು ತಕ್ಷಣ ಒದಗಿಸಬೇಕು, ಕೆ.ಬಾಡಗ ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಈ ಹಿಂದೆ ವಾಸವಿದ್ದ 50 ಕುಟುಂಬಗಳಿಗೆ ನಿವೇಶನ ಹಂಚಬೇಕು, ಕುಟ್ಟ ಗ್ರಾ.ಪಂ ವ್ಯಾಪ್ತಿಯ ನಾತಂಗಲ ಗ್ರಾಮದಲ್ಲಿ ಪರಿಶಿಷ್ಟ ಪಂಗಡದವರಿಗೆ ಹಕ್ಕು ಪತ್ರ ನೀಡಿದ್ದು, ಇಲ್ಲಿ ವಾಸ ಮಾಡುತ್ತಿರುವವರಿಗೆ ಮನೆ ಮಂಜೂರು ಮಾಡಿ ಇಲ್ಲಿ ವಾಸವಿರುವ ಜನರಿಗೆ ಅನುಕೂಲ ಮಾಡಿಕೊಡಬೇಕು ಮಾಡಬೇಕೆಂದು ಒತ್ತಾಯಿಸಿದರು.
ತಿತಿಮತಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ದಲಿತ ಕಾಲೊನಿಗಳಿಗೆ ಕುಡಿಯುವ ನೀರು ಮತ್ತು ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಕೊಡಬೇಕು, ಜಿಲ್ಲೆಯಲ್ಲಿ ವಾಸಿಸುತ್ತಿರುವ ದಲಿತ ಕಾಲೊನಿಗಳಿಗೆ ಕುಡಿಯುವ ನೀರಿನ ಅಭವಾವಿದ್ದು, ಕಾಲೊನಿಗಳನ್ನು ಪರಿಶೀಲಿಸಿ ನೀರಿನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಬೇಡಿಕೆಯ ಮನವಿ ಪತ್ರವನ್ನು ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ದಲಿತ ಸಂಘರ್ಷ ಸಮಿತಿಯ ಮುಖಂಡರುಗಳು, ಕಾರ್ಯಕರ್ತರು, ಪ್ರಗತಿಪರ ಚಿಂತಕರು, ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
















