ಮಡಿಕೇರಿ ಮಾ.21 : ಕೊಡಗು ಹಿತರಕ್ಷಣಾ ವೇದಿಕೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ನಗರದ ತ್ಯಾಗರಾಜ ಕಾಲೋನಿಯ ಶಕ್ತಿ ವೃದ್ಧಾಶ್ರಮದ ವಾಸಿಗಳೊಡನೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೀನಾಜ್ ಪ್ರವೀಣ್ ಮಾತನಾಡಿ, ವೇದಿಕೆ ನಡೆದು ಬಂದ ಹಾದಿ ಹಾಗೂ ವೇದಿಕೆಯ ಕಾರ್ಯ ವೈಕರಿಗಳ ಬಗ್ಗೆ ಮಾಹಿತಿ ನೀಡಿದರು.
ಸಮಾಜ ಸೇವಕ ವಿಕ್ರಂ ಶೆಟ್ಟಿ ( ವಿಕ್ರಂ ಜಾದೂಗಾರ್ ) ಮಾತನಾಡಿ, ವೇದಿಕೆ ವತಿಯಿಂದ ಉತ್ತಮ ಕಾರ್ಯಕ್ರಮಗಳು ನಡೆಸಲಾಗುತ್ತಿದ್ದು, ಜನರ ಸಮಸ್ಯೆ ಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಗಳನ್ನು ನಡೆಸುವಂತಾಗಲಿ ಎಂದು ಹಾರೈಸಿದ ಅವರು, ವೇದಿಕೆಯ ಜನಪರ ಕೆಲಸಗಳಿಗೆ ನಮ್ಮ ಸಹಕಾರವಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ವೇದಿಕೆ ಅಧ್ಯಕ್ಷ ರವಿ ಗೌಡ, ವೇದಿಕೆಯು ಕಳೆದ ನಾಲ್ಕು ವರ್ಷಗಳಿಂದ ಉತ್ತಮ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು, ಕೊಡಗಿನಾದ್ಯಂತ ಕೊಡಗು ಹಿತರಕ್ಷಣಾ ವೇದಿಕೆ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ವೇದಿಕೆಯ ಪ್ರತಿ ಸದಸ್ಯರು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸ್ಪಂದನೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಸ್ಪಂದನೆ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಮಡಿಕೇರಿ ತಾಲೂಕು ಅಧ್ಯಕ್ಷ ನಾಗೇಶ್, ತಾಲೂಕು ಕಾರ್ಯದರ್ಶಿ ಅಕ್ಷಿತ್, ಮಹಿಳಾ ತಾಲೂಕು ಅಧ್ಯಕ್ಷ ಕವಿತಾ ಪ್ರಸಾದ್, ನಿರ್ದೇಶಕರಾದ ಲಿಲ್ಲಿಗೌಡ, ಅಜಿತ್, ಕೃತಿಕ, ಹಾಗೂ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮವನ್ನು ವೇದಿಕೆ ಸದಸ್ಯರು ಹಾಗೂ ಶಕ್ತಿ ಆಶ್ರಮದ ಮೇಲ್ವಿಚಾರಕ ಸತೀಶ್ ಸ್ವಾಗತಿಸಿ, ವಂದಿಸಿದರು. ಕೊನೆಯಲ್ಲಿ ವೇದಿಕೆ ಸದಸ್ಯರಿಂದ ಕೇಕ್ ಕತ್ತರಿಸಿ, ವಾರ್ಷಿಕೋತ್ಸವ ಆಚರಿಸಲಾಯಿತು.














