ಮಡಿಕೇರಿ ಮಾ.25 : ನಾಪೋಕ್ಲು ಗ್ರಾ.ಪಂ ಗೆ ಒಳಪಟ್ಟ ಕೊಳಕೇರಿ ಗ್ರಾಮದಿಂದ ಕೋಕೇರಿ ನರಿಯಂದಡ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ತಕ್ಷಣವೇ ರಸ್ತೆ ದುರಸ್ಥಿ ಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಕೊಳಕೇರಿಯಲ್ಲಿ ಪ್ರತಿಭಟನೆ ನಡೆಸಿದರು.
ನಾಪೋಕ್ಲು -ವಿರಾಜಪೇಟೆ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ ಎರಡು ಗ್ರಾಮದ ಜನರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿ ಪಟ್ಟುಹಿಡಿದರು.
ಈ ಸಂದರ್ಭ ಕೋಕೇರಿ ಗ್ರಾಮಸ್ಥ ಚೇನಂಡ ಜಪ್ಪು ದೇವಯ್ಯ ಮಾತನಾಡಿ, ಕೊಳಕೇರಿಯಿಂದ ಕೋಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 5 ಕಿ.ಮೀ ರಸ್ತೆ ಜಿ.ಪಂ ಗೆ ಒಳಪಟ್ಟ ರಸ್ತೆಯಾಗಿದ್ದು, ಇದರ ಬಗ್ಗೆ ಹಲವು ಭಾರಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ರಸ್ತೆ ದುರಸ್ತಿ ಪಡಿಸುವ ಪೆÇಳ್ಳು ಭರವಸೆ ನೀಡಿ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.
ಮುಂಬರುವ ಚುನಾವಣೆಗೂ ಮುನ್ನ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಪಡಿಸಬೇಕು. ಇಲ್ಲದಿದ್ದರೆ ಯಾವ ರಾಜಕೀಯ ಪಕ್ಷದವರು, ಕಾರ್ಯಕರ್ತರು ಎರಡು ಗ್ರಾಮಗಳಿಗೆ ಮತ ಕೇಳಲು ಬರಬೇಡಿ ಎಂದು ಎಚ್ಚರಿಕೆ ನೀಡಿದರು.
ಗ್ರಾ.ಪಂ ಸದಸ್ಯ ಅಶ್ರಫ್ ಮಾತನಾಡಿ, ಕಳೆದ ಎರಡು ದಶಕಗಳಿಂದ ಈ ರಸ್ತೆ ದುರಸ್ಥಿ ಕಂಡಿಲ್ಲ, ಪ್ರತಿವರ್ಷ ಎರಡು ಗ್ರಾಮದ ಗ್ರಾಮಸ್ಥರು ಸೇರಿ ಸ್ವಂತ ಖರ್ಚಿನಲ್ಲಿ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ಈ ಹದಗೆಟ್ಟ ರಸ್ತೆಯಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸಲು ಹರಸಾಹಸ ಪಡುವಂತಹ ಪರಿಸ್ಥಿತಿ ಎದುರಾಗಿದೆ. ಹಲವು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ದುರಸ್ಥಿ ಪಡಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಖಾಸಿಂ, ಚೇನಂಡ ಗಿರೀಶ್ ಮತ್ತಿತರರು ರಸ್ತೆ ದುರಸ್ಥಿಪಡಿಸದ ಅಧಿಕಾರಿಗಳ, ಜನಪ್ರತಿನಿದಿಗಳ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಸ್ಥಳಕ್ಕೆ ಆಗಮಿಸಿದ ಜಿ.ಪಂ ಅಭಿಯಂತರರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ರಸ್ತೆ ಗುಂಡಿಮುಚ್ಚುವ ಕಾರ್ಯಕ್ಕೆ ಬಿಡುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಉತ್ತಮ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭ ಮಧ್ಯ ಪ್ರವೇಶಿಸಿದ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಪರಿಹರಿಸಲು ಸಹಕರಿಸುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯನ್ನು ಗ್ರಾಮಸ್ಥರು ಕೈ ಬಿಡಲಾಯಿತು.
ಕೋಕೇರಿ ಗ್ರಾಮಸ್ಥರಾದ ಚೇನಂಡ ನಂದ ಜಗದೀಶ್, ಪೊನ್ನಚಂಡ ಅರುಣ, ಚೇನಂಡ ಬೋಪಯ್ಯ, ತಮ್ಮಯ್ಯ, ಮಧು ಮಾದಯ್ಯ, ಸಂಪತ್, ಕುಮ್ಮಂಡ ನಂದ ಕಾಳಪ್ಪ, ಮುತ್ತು ಮುತ್ತಪ್ಪ, ಕೊಳಕೇರಿ ಗ್ರಾಮಸ್ಥರಾದ ಎಂ.ಎ.ಮೊಯ್ದು, ಎಂ.ಎಚ್.ರಫೀಕ್, ಎಂ.ಎಂ.ರಜಾಕ್, ಮಹಮ್ಮದ್, ಹಸೈನಾರ್ ಹಾಜಿ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವರದಿ :ಝಕರಿಯ ನಾಪೋಕ್ಲು