ಸೋಮವಾರಪೇಟೆ ಮಾ.25 : ಗೌಡಳ್ಳಿ ಹಿಂದೂ ಗೆಳೆಯರ ಬಳಗದ ವತಿಯಿಂದ ಗೌಡಳ್ಳಿ ಬಿಜಿಎಸ್ ಮೈದಾನದಲ್ಲಿ ಆಯೋಜನೆಗೊಂಡಿದ್ದ 5ನೇ ವರ್ಷದ ಮುಕ್ತ ಫುಟ್ಬಾಲ್ ಪಂದ್ಯಾವಳಿಯ ಪ್ರತಿಷ್ಠೆಯ ‘ಹಿಂದೂಕಪ್’ ಟ್ರೋಫಿಯನ್ನು ಗೌಡಳ್ಳಿ ಗೋಲ್ಡನ್ ಗೈಸ್ ತಂಡ ಮುಡಿಗೇರಿಸಿಕೊಂಡಿತು.
ಟೂರ್ನಿಯ ಬಲಿಷ್ಠ ತಂಡ ಎನಿಸಿಕೊಂಡಿದ್ದ ಕೂಗೂರು ಗೆಳೆಯರ ಬಳಗ ತಂಡ ಫೈನಲ್‍ನಲ್ಲಿ ಎಡವಿದ ಪರಿಣಾಮ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ವಿದೇಶಿ ಹಾಗೂ ವಿವಿಧ ರಾಜ್ಯಗಳ ಆಟಗಾರರನ್ನು ಹೊಂದಿದ್ದ ಎರಡು ತಂಡಗಳ ಫೈನಲ್ ಹೈಲೋಲ್ಟೇಜ್ ಪಂದ್ಯವಾಗಿತ್ತು. ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವಾದರೂ ಯಾವೊಂದು ತಂಡವೂ ಫೀಲ್ಡ್ ಗೋಲ್ ಬಾರಿಸಲು ಸಾಧ್ಯವಾಗಲಿಲ್ಲ. ನಂತರ ನಡೆದ ಪೆನಾಲ್ಟಿ ಶೂಟೌಟ್‍ನಲ್ಲಿ ಗೋಲ್ಡನ್‍ಗೈಸ್ ತಂಡವು 3 ಗೋಲು ಗಳಿಸಿದರೆ, ಕೂಗೂರು ತಂಡವು 2 ಗೋಲು ಗಳಿಸಲಷ್ಟೇ ಸಾಧ್ಯವಾಗಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮೊದಲು ನಡೆದ ರೋಚಕ ಮೊದಲ ಸೇಮಿಸ್‍ನಲ್ಲಿ ಗೆಳೆಯರ ಬಳಗವು ಟೀಮ್ ಶುಂಠಿ ಬಿ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ 2-0 ಗೋಲುಗಳಿಂದ ಸೋಲಿಸಿತು. ಎರಡನೇ ಸೆಮಿಫೈನಲ್‍ನಲ್ಲಿ ಗೋಲ್ಡನ್‍ಗೈಸ್ ತಂಡ, ಬೀಟಿಕಟ್ಟೆ ನೀಲ್‍ಶಾಂತ್ ಬಾಯ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ 2-1 ಗೋಲುಗಳಿಂದ ಮಣಿಸಿತು.
ಉದ್ಯಮಿ ಚಾಮೇರ ಪವನ್ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ 16 ತಂಡಗಳು ಪಾಲ್ಗೊಂಡಿದ್ದವು. ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಮಟ್ಟದ ಪುಟ್ಬಾಲ್ ಆಟಗಾರರು ಮೈದಾನದಲ್ಲಿ ಆಟವಾಡಿ ಕ್ರೀಡಾಪ್ರೇಮಿಗಳ ಗಮನ ಸೆಳೆದರು.
ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭಾಗವಹಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ಉದ್ಯಮಿಗಳಾದ ಗಿರೀಶ್ ಮಲ್ಲಪ್ಪ, ಕೋಟೆಯೂರಿನ ಎಂ.ಎಲ್. ಸಂತೋಷ್, ದೀಣೆಕೊಪ್ಪ ಸೋಮಶೇಖರ್, ಪಿ.ಕೆ. ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಜಿ.ಮಲ್ಲಿಕಾ, ಪ್ರಮುಖರಾದ ಎಸ್.ಬಿ.ಭರತ್‍ಕುಮಾರ್, ಎಚ್.ಪಿ.ಸುರೇಶ್, ಎಸ್.ಎ.ಸುರೇಶ್, ಪಿ.ಕೆ.ರವಿ, ಚಕ್ರವರ್ತಿ ಸುರೇಶ್, ಬಿ.ಎಸ್.ಸುಂದರ್, ಬಳಗದ ಅಧ್ಯಕ್ಷ ಎಚ್.ಎಂ. ಜಿತೇಂದ್ರ, ಕಾರ್ಯದರ್ಶಿ ಅಜ್ಜಳ್ಳಿ ನವೀನ್, ಜಿ.ಪಿ.ಸುನಿಲ್, ಪ್ರಸನ್ನ ಮತ್ತು ಪದಾಧಿಕಾರಿಗಳು ಇದ್ದರು.







