ಮಡಿಕೇರಿ ಮಾ.25 : ಮಕ್ಕಳ ಕನಸಿನ ಬಣ್ಣಕ್ಕೆ ಮತ್ತಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಏ.22 ರಿಂದ ಏ.30ರ ವರೆಗೆ ಮಡಿಕೇರಿಯಲ್ಲಿ ರಂಗ ಶೈಲಿಯ ರಾಜ್ಯ ಮಟ್ಟದ ಬೇಸಿಗೆ ಶಿಬಿರ “ಬಣ್ಣ-2023” ನಡೆಯಲಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸುಳ್ಯ ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲ್, ಮಕ್ಕಳಲ್ಲಿ ಕ್ರಿಯಾತ್ಮಕತೆ, ವ್ಯಕ್ತಿತ್ವ ವಿಕಸನ, ಸಮಯದ ಬಳಕೆ, ಶಿಸ್ತು ಹಾಗೂ ಜೀವನ ಮೌಲ್ಯಗಳನ್ನೊಳಗೊಂಡಂತೆ ಹಲವಾರು ಮೌಲ್ಯಯುತವಾದ ಯೋಚನಾಶಕ್ತಿಯನ್ನು ಬೆಳೆಸುವುದು ಅನಿವಾರ್ಯವಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಬೇರನ್ನು ಗಟ್ಟಿಗೊಳಿಸಲು ಸುಳ್ಯದ ರಂಗ ಮಯೂರಿ ಕಲಾ ಶಾಲೆ, ಮಡಿಕೇರಿ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಎರಡನೇ ವರ್ಷದ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದರು.
ಪ್ರತಿದಿನ ಬೆಳಿಗ್ಗೆ 8.45 ರಿಂದ ಸಂಜೆ 4.30ರ ವರೆಗೆ 7 ರಿಂದ 17 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಯೋಗ, ಭಜನೆ, ಕೊಡಗಿನ ಇತಿಹಾಸ ಕಥೆಗಳು, ದೇಸಿ ಆಟಗಳು, ಜನಪದ ಕಲೆ, ನಾಟಕ ನಿರ್ಮಾಣ ಮತ್ತು ತರಬೇತಿ, ವ್ಯಕ್ತಿತ್ವ ವಿಕಸನ, ಪರಿಸರ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ರಂಗ ಸಂಗೀತ, ಟೌನ್ ಟ್ರಿಪ್, ನೃತ್ಯ ತರಬೇತಿ ನಡೆಯಲಿದೆ.
ಈಗಾಗಲೇ ದಾಖಲಾತಿ ಆರಂಭಗೊಂಡಿದ್ದು, ಕನ್ನಡ ಮಾಧ್ಯಮ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗಿದೆ. ಆಸಕ್ತರು ಫೋಟೋ ಎಕ್ಸ್‍ಪ್ರೆಸ್, ಡಿಜಿಟಲ್ ಲ್ಯಾಬ್, ಚರ್ಚ್ ಕಾಂಪ್ಲೆಕ್ಸ್, ಜನರಲ್ ತಿಮ್ಮಯ್ಯ ವೃತ್ತ, ಮಡಿಕೇರಿ ಇಲ್ಲಿಂದ ಅರ್ಜಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ನವೀನ್ ಅಂಬೆಕಲ್ಲು – 9448005647, ಲೋಕೇಶ್ ಊರುಬೈಲ್ -9611355496, ಪೃಥ್ವಿ ನಾಯಕ್ -9740283098, ಕಾಂಚನ ಕೆದಂಬಾಡಿ -9008198955 ಸಂಪರ್ಕಿಸಬಹುದಾಗಿದೆ ಎಂದರು.










