ಮಡಿಕೇರಿ ಮಾ.25 : ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಮೀಸಲಿದ್ದ ಶೇ.4ರ ಮೀಸಲಾತಿಯನ್ನು ರದ್ದು ಪಡಿಸಿರುವ ಸರ್ಕಾರದ ಕ್ರಮ ಖಂಡನೀಯವೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಲ್ಪಸಂಖ್ಯಾತರು ಬೆಳವಣಿಗೆ ಕಾಣುತ್ತಿರುವ ಸಂದರ್ಭದಲ್ಲಿ ಮೀಸಲಾತಿಯ ಹಕ್ಕು ಕಸಿದುಕೊಳ್ಳುತ್ತಿರುವುದು ಬಹುದೊಡ್ಡ ಅನ್ಯಾಯವಾಗಿದೆ. ಸರ್ಕಾರ ಈ ನಿರ್ಧಾರವನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿದರು.
ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಸಂದರ್ಭ ಗೋಣಿಕೊಪ್ಪಲು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಸಕ ಈಶ್ವರಪ್ಪ ಅವರು ಮುಸಲ್ಮಾನರ ಧರ್ಮವನ್ನು ನಿಂದಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಧರ್ಮ ಆಧಾರಿತವಾಗಿ ಮತ ಕೇಳುವ ಬದಲು ಅಭಿವೃದ್ಧಿಪರ, ಸ್ನೇಹಪರ ಮತ್ತು ತನ್ನ ತತ್ವ ಸಿದ್ಧಾಂತಗಳಡಿ ಮತ ಯಾಚಿಸಲಿ ಎಂದರು. ಸಮಾಜದಲ್ಲಿ ದ್ವೇಷ ಭಾವನೆ ಮೂಡಿಸಿ ರಾಜಕೀಯ ಲಾಭ ಪಡೆದುಕೊಳ್ಳುವುದು ಸರಿಯಲ್ಲವೆಂದರು.
::: ಕಾಂಗ್ರೆಸ್ ಗೆ ಸೇರ್ಪಡೆ :::
ಆಮ್ ಆದ್ಮಿ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಕೋಳಿಬೈಲು ಚಿನ್ನಪ್ಪ ವೆಂಕಟೇಶ್ ಅವರು ಇದೇ ಸಂದರ್ಭ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಸೇರ್ಪಡೆಯ ನಂತರ ಮಾತನಾಡಿದ ಅವರು ಆಮ್ ಆದ್ಮಿ ಪಕ್ಷಕ್ಕೆ ಕೊಡಗಿನಲ್ಲಿ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ, ಇಲ್ಲಿನ ಜನ ಪಕ್ಷವನ್ನು ಇನ್ನೂ ಒಪ್ಪಿಕೊಂಡಿಲ್ಲ. ಕೊಡಗಿನಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕು, ಬದಲಾವಣೆ ಮೂಡಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ವಿರಾಜಪೇಟೆ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರಿಗೆ ಬೆಂಬಲ ವ್ಯಕ್ತಪಡಿಸಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಬಿ.ಎಸ್.ರಮಾನಾಥ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಡಿಸಿಸಿ ಸದಸ್ಯ ಸುನೀಲ್ ಪತ್ರವೋ ಹಾಗೂ ಭಾಗಮಂಡಲ ವಲಯಾಧ್ಯಕ್ಷ ದೆವಂಗೋಡಿ ಹರ್ಷ ಉಪಸ್ಥಿತರಿದ್ದರು.









