ಮಡಿಕೇರಿ ಮಾ.25 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಕ್ರಮವನ್ನು ಖಂಡಿಸಿ ಹಾಗೂ ಬಿಜೆಪಿ ಸರಕಾರಿ ಯಂತ್ರವನ್ನು ದುರುಪಯೋಗ ಪಡಿಸುತ್ತಿದೆ ಎಂದು ಆರೋಪಿ ಕೊಡಗು ಜಿಲ್ಲಾ ಕಾಂಗ್ರೆಸ್ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ದೇಶದಲ್ಲಿ ಕಳೆದ 8 ವರ್ಷಗಳಿಂದ ಅರಾಜಕತೆ ಸೃಷ್ಟಿಯಾಗಿದೆ. ಅಧಿಕಾರದ ದರ್ಪ ಕಂಡುಬರುತ್ತಿದ್ದು, ಯಾರಿಗೂ ಗಟ್ಟಿ ಧ್ವನಿ ಎತ್ತಲಾಗುತ್ತಿಲ್ಲ. ಪತ್ರಿಕಾ ರಂಗವೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾಗುತ್ತಿಲ್ಲ ಎಂದು ಆರೋಪಿಸಿದರು.
ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ, ಪ್ರತಿಯೊಂದನ್ನು ಪ್ರಶ್ನಿಸುವ ಹಕ್ಕು ಇದೆ. ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ ವಿಚಾರಕ್ಕೆ ಅನುಗುಣವಾಗಿ ಮಾತನಾಡಿದ್ದಾರೇ ಹೊರತು ವೈಯಕ್ತಿಕ ದ್ವೇಶದಿಂದಲ್ಲ. ಇಂತಹ ವಿಚಾರವನ್ನು ನ್ಯಾಯಾಲಯಕ್ಕೆ ತೆಗುಕೊಂಡು ಹೋಗಿರುವುದು ಸರಿಯಲ್ಲ ಎಂದರು.
ರಾಹುಲ್ ಗಾಂಧಿ ಅವರು 3,600 ಕಿ.ಮೀ ಪಾದಯಾತ್ರೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅದನ್ನು ಸಹಿಸಲಾಗದೆ, ದೇಶದ ರಾಜಕೀಯದಿಂದ ದೂರ ಇಡಬೇಕೆಂದು ಸರ್ಕಾರ ಇಲ್ಲಸಲ್ಲದ ಪ್ರಕರಣ ದಾಖಲಿಸಿದೆ ಎಂದು ಆರೋಪಿಸಿದರು.
ಪ್ರತಿಯೊಂದು ವಿಚಾರದಲ್ಲೂ ಬಿಜೆಪಿ ದೇಶದಲ್ಲಿ ಧಮನಕಾರಿ ರೀತಿಯಲ್ಲಿ ವಿರೋಧ ಪಕ್ಷವನ್ನು ಇಲ್ಲದಂತೆ ಮಾಡಿ, ಧರ್ಮ, ಧರ್ಮದ ನಡುವೆ ಕಿಚ್ಚನ್ನು ಹಚ್ಚಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದ ಧರ್ಮಜ ಉತ್ತಪ್ಪ, ವಿರೋಧ ಪಕ್ಷದ ನಾಯಕನಿಗೆ ಗೌರವ ನೀಡುವ ಕೆಲಸ ಆಗಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಮಾತನಾಡಿ, ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದು ಮಾಡುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅವರ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಿದೆ. ಇದು ತಾತ್ಕಲಿಕ ಹಿನ್ನಡೆಯಷ್ಟೇ ರಾಹುಲ್ ಗಾಂಧಿ ಮುಂದೆ ಇನ್ನೂ 3 ಕೋರ್ಟ್‍ಗಳಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶಗಳಿದೆ ಎಂದರು.
ಕೆಪಿಸಿಸಿ ವಕ್ತಾರ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಕಾಂಗ್ರೆಸ್ ನಾಯಕ ಸಂಕೇತ್ ಪೂವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹೆಚ್.ಎ.ಹಂಸ, ಮಡಿಕೇರಿ ನಗರಾಧ್ಯಕ್ಷ ಬಿ.ವೈ.ರಾಜೇಶ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಎಂ.ಇಸ್ಮಾಯಿಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಸೇವಾದಳ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರಾ ಮೈನ, ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪ್ರಮುಖರಾದ ಆರ್.ಪಿ.ಚಂದ್ರಶೇಖರ್, ಚುಮ್ಮಿದೇವಯ್ಯ, ಜಫ್ರುಲ್ಲ, ಜುಲೆಕಾಬಿ, ಮುಕ್ಕಟೀರ ಸಂದೀಪ್, ಕೆ.ಜಿ.ಪೀಟರ್, ಎ.ಟಿ.ದೇವಯ್ಯ, ಟಿ.ಹೆಚ್.ಉದಯ ಕುಮಾರ್, ವೆಂಕಟೇಶ್ ಹಾಗೂ ಡಿಸಿಸಿ ಸದಸ್ಯರು, ಹಿರಿಯ ನಾಯಕರು, ವಿವಿಧ ಘಟಕದ ಅಧ್ಯಕ್ಷರು, ಸದಸ್ಯರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.