ಮಡಿಕೇರಿ ಮಾ.25 : ಸಮಾಜದ ಸ್ವಾಸ್ಥ್ಯ ಕಾಪಾಡಲು ಉರಿಗೌಡ ಹಾಗೂ ನಂಜೇಗೌಡ ಪಾತ್ರಗಳ ಕುರಿತು ನೈಜ ವಿಚಾರವನ್ನು ತಿಳಿಸಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮಿಗಳ ವಿರುದ್ಧ ಹಗುರವಾಗಿ ಮಾತನಾಡಿರುವ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ನಡೆಯನ್ನು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗೌರವಯುತ ಸ್ಥಾನದಲ್ಲಿರುವ ಶ್ರೀ ನಿರ್ಮಲಾನಂದ ಸ್ವಾಮಿಗಳು ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಂಡು ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಆದರೆ ಒಬ್ಬ ಕಲಾವಿದನ ಸ್ಥಾನದಲ್ಲಿರುವ ಕಾರ್ಯಪ್ಪ ಅವರು ತಮ್ಮ ಮೂಗಿನ ನೇರಕ್ಕೆ ಎಲ್ಲರೂ ಮಾತನಾಡಬೇಕು ಎಂದು ಒತ್ತಡ ಹೇರುವ ಧಾಟಿಯಲ್ಲಿ ಹೇಳಿಕೆಗಳನ್ನು ನೀಡಿರುವುದು ಅವರ ಅಸಹನೆಯ ಮನೋಸ್ಥಿತಿಗೆ ಸಾಕ್ಷಿಯಾಗಿದೆ. ಸ್ವಾಮೀಜಿಯವರ ಬಗ್ಗೆ ಇವರು ನೀಡಿರುವ ಹೇಳಿಕೆ ಇಡೀ ಒಕ್ಕಲಿಗ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಗಳು ಎರಡು ಪಾತ್ರಗಳ ಬಗ್ಗೆ ದಾಖಲೆ ಇಲ್ಲದೆ ಮಾತನಾಡಬೇಡಿ, ದಾಖಲೆ ತಂದರೆ ತಜ್ಞರಿಂದ ಅಧ್ಯಯನ ನಡೆಸಲು ಕ್ರಮ ಕೈಗೊಳ್ಳೋಣ ಎಂದು ಸಲಹೆ ನೀಡಿದ್ದಾರೆಯಷ್ಟೆ. ಆದರೆ ಕಾರ್ಯಪ್ಪ ಅವರು ತಾವು ಸೃಷ್ಟಿಸಿದ ನಾಟಕದ ಎರಡು ಪಾತ್ರಗಳು ನೈಜವೆಂದು ಪ್ರತಿಬಿಂಬಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಸ್ವಾಮೀಜಿಗಳ ವಿರುದ್ಧವೇ ಅರ್ಥಹೀನ ಅಭಿಪ್ರಾಯ ಮಂಡಿಸುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಾಜದ ಹಿತಕಾಯುತ್ತಿರುವ ಶ್ರೀನಿರ್ಮಲಾನಂದ ಸ್ವಾಮಿಗಳ ವಿರುದ್ಧ ನೀಡಿರುವ ಹೇಳಿಕೆಯನ್ನು ಕಾರ್ಯಪ್ಪ ಅವರು ವಾಪಾಸ್ಸು ಪಡೆಯಬೇಕು ಮತ್ತು ಬಹಿರಂಗ ಕ್ಷಮೆಯಾಚಿಸಬೇಕೆಂದು ಎಸ್.ಎಂ.ಚಂಗಪ್ಪ ಒತ್ತಾಯಿಸಿದ್ದಾರೆ.










