ಮಡಿಕೇರಿ ಮಾ.26 : ಚೆಯ್ಯಂಡಾಣೆ ಸಮೀಪದ ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಚೇಲಾವರ ಗ್ರಾಮಕ್ಕೆ ತೆರಳುವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮದ ಸಮಸ್ಯೆಯನ್ನು ನಿರ್ಲಕ್ಷಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥ ಪಿ.ಕೆ.ಸೊಮ್ಮಯ್ಯ ಮಾತನಾಡಿ ಹದಗೆಟ್ಟ 6 ಕಿ.ಮೀ ದೂರದ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಬ್ಬೆ ಜಲಪಾತ, ಕರಡ ಕೀಮಲೆ ಕಾಡು ಗಿರಿಜನ ಕಾಲೋನಿ, ತಟ್ಟಮಕ್ಕಿ ಪೈಸಾರಿ ನಿವಾಸಿಗಳು ಪ್ರತಿದಿನ ಸಂಚರಿಸುವ ರಸ್ತೆ ಶೋಚನೀಯ ಸ್ಥಿತಿಯಲ್ಲಿದೆ ಎಂದು ಗಮನ ಸೆಳೆದರು.
ಜೈನೀರ ರಾಜ್ ಕುಮಾರ್ ಮಾತನಾಡಿ ಚೆಯ್ಯಂಡಾಣೆಯಿಂದ ಚೇಲಾವರ ಗ್ರಾಮಕ್ಕೆ ತೆರಳುವ ರಸ್ತೆ ಸುಮಾರು 10 ವರ್ಷಗಳಿಂದ ದುರಸ್ತಿ ಕಂಡಿಲ್ಲ. ಗ್ರಾಮ ವಾಸ್ತವ್ಯದ ಸಂದರ್ಭ ಇಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಖುದ್ದು ಗ್ರಾಮಕ್ಕೆ ಭೇಟಿ ನೀಡಿದಾಗ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲಾಗದೆ ಸಿಲುಕಿಕೊಂಡಿದ್ದರು. ಈ ಸಂದರ್ಭ ಗ್ರಾಮಸ್ಥರು ಸಹಕಾರ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಅಧಿಕಾರಿಗಳು ರಸ್ತೆ ದುರಸ್ತಿಯ ಭರವಸೆಯನ್ನು ನೀಡಿ ಹೋಗಿದ್ದರು. ಆದರೆ ಇಲ್ಲಿಯವರೆಗೆ ರಸ್ತೆ ಅಭಿವೃದ್ಧಿಯಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ, ನೀರು ಮತ್ತು ವಿದ್ಯುತ್ ಈ ಮೂರು ಬೇಡಿಕೆಗಳನ್ನು ಮಾತ್ರ ಗ್ರಾಮಸ್ಥರು ಆಡಳಿತ ವ್ಯವಸ್ಥೆಯ ಮುಂದಿಡುತ್ತಲೇ ಬಂದಿದ್ದಾರೆ. ಆದರೆ ಯಾವುದೇ ರೀತಿಯ ಸ್ಪಂದನೆ ದೊರೆಯದೆ ಇರುವುದರಿಂದ ಚುನಾವಣೆ ಬಹಿಷ್ಕಾರ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ಮಾಹಿತಿ ತಿಳಿದ ಗ್ರಾಮಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಸ್ಥಳಕಾಗಮಿಸಿ ಗ್ರಾಮಸ್ಥರ ಅಹವಾಲನ್ನು ಪಡೆದುಕೊಂಡು ಇದಕ್ಕೆ ಸಂಬAಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುದು ಎಂದರು.
ಗ್ರಾಮಸ್ಥರು ರಸ್ತೆಯ ಅವ್ಯವಸ್ಥೆಯ ಬಗ್ಗೆ ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಸ್ಥಳೀಯ ಗ್ರಾ.ಪಂ ಸದಸ್ಯ ಈರಪ್ಪ ಮಾತನಾಡಿದರು.
ಗ್ರಾಮಸ್ಥರಾದ ಪಿ.ಪಿ.ಸೋಮ್ಮಣ್ಣ, ಸುಬ್ಬಯ್ಯ, ಪೊನ್ನಣ್ಣ, ಲೋಕೇಶ್, ಪವನ್, ತಮ್ಮು, ಉಮೇಶ್, ತಿಲಕ, ರಾಜೇಶ್ ಪಿ.ಎಂ. ಮತ್ತಿತರರು ಹಾಜರಿದ್ದರು.










