ಮಡಿಕೇರಿ ಏ.1 : ಸಿದ್ದಾಪುರದಲ್ಲಿ ಏ.5 ರಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ತಿಳಿಸಿದರು.
ನಗರದಲ್ಲಿ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಾಪುರದ ಸ್ವರ್ಣಮಾಲ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಪಾಲ್ಗೊಳ್ಳಲಿದ್ದು, ಸುಮಾರು 500 ಮಂದಿ ಸೇರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 32 ಸಮುದಾಯಗಳು ಸೇರಿದಂತೆ 18 ಕೊಡವ ಬಾಷಿಕ ಸಮುದಾಯಗಳು ಹಿಂದುಳಿದ ವರ್ಗಕ್ಕೆ ಸೇರಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಮುದಾಯ ಹಿತಾಶಕ್ತಿಗೆ ಅನುಗುಣವಾಗಿ ನಡೆದುಕೊಳ್ಳಲಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಮೂಲ ನಿವಾಸಿಗಳು ಹಾಗೂ ಇತರ ಹಿಂದುಳಿದ ವರ್ಗಗಳು ಕೊಡಗಿನಲ್ಲಿ ನೆಲೆಸಿದ್ದು, 18 ಕೊಡವ ಬಾಷಿಕ ಸಮುದಾಯಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಮೀಸಲಾತಿಯನ್ನು ವರ್ಗೀಕರಣ ಮಾಡಿ ಗೊಂದಲದ ಗೂಡು ಮಾಡಿದೆ ಎಂದು ಆರೋಪಿಸಿದರು.
ಕಾಂತರಾಜು ವರದಿ ಅನುಷ್ಠಾನಕ್ಕೆ ಬಂದಿದ್ದಾರೆ ಅನೇಕ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ದೊರೆಯುತ್ತಿತ್ತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೊಡನೆ ಕಾಂತರಾಜು ವರದಿಯನ್ನು ಅನುಷ್ಠಾನಗೊಳಿಸುವ ಮಹತ್ತರ ನಿರ್ಧರ ಕೈಗೊಳ್ಳಲಿದೆ ಎಂದರು.
ಸಮಾವೇಶದಲ್ಲಿ ಭೂಮಿ ಸಮಸ್ಯೆ, ಅರಣ್ಯ ಸಮಸ್ಯೆ, ಸಿ ಮತ್ತು ಡಿ ಲ್ಯಾಂಡ್ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿ ಜನರಿಗೆ ಮನವರಿಕೆ ಮಾಡಲಾಗುವುದು. ಕೊಡಗಿನ ಸಮಸ್ಯೆಯನ್ನು ಚುನಾವಣ ಪ್ರಣಾಳಿಕೆಯಲ್ಲಿ ಅಳವಡಿಸಿ ಅನೇಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಬಿ.ಎನ್.ಪ್ರಥ್ಯು, ಕೆಪಿಸಿಸಿ ಕಾರ್ಯದರ್ಶಿ ಮುದ್ದಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಉಪಸ್ಥಿತರಿದ್ದರು.









