ಕುಶಾಲನಗರ,ಏ.3 : ಶಾಲಾ ಮಕ್ಕಳು ಶಾಲೆ ಮುಗಿದ ನಂತರ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು. ಶಿಬಿರದಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೃದ್ಧಿಯಾಗಲಿದೆ ಎಂದು ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹೇಳಿದರು.
ಕೂಡಿಕೆಯ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ವತಿಯಿಂದ ಏರ್ಪಡಿಸಲಾಗಿದ್ದ ಎರಡನೇ ವರ್ಷದ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಮಕ್ಕಳನ್ನು ವಿದ್ಯಾಬ್ಯಾಸ ಎಂಬ ಹೆಸರನ್ನೇಳಿ, ಒತ್ತಡವನ್ನು ಹೇರಬಾರದು. ವಿದ್ಯಾಬ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ನೀಡಬೇಕು. ವರ್ಷವಿಡೀ ಓದಿನಿಂದ ದಣಿದಿರುವ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರಗಳು ಹುಮ್ಮಸ್ಸು ನೀಡಲಿದೆ ಎಂದರು.
ಬೇಸಿಗೆ ಶಿಬಿರದಲ್ಲಿ ನಾನಾ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ತಮ್ಮ ಪ್ರತಿಭೆಯನ್ನು ಕಂಡುಕೊಳ್ಳಲು ಹಾಗೂ ಇರುವ ಪ್ರತಿಭೆಯನ್ನು ವೃದ್ಧಿಸಿಕೊಳ್ಳಲು ಬೇಸಿಗೆ ಶಿಬಿರ ಉತ್ತಮವಾದ ವೇದಿಕೆಯಾಗಿದೆ. ಆದ್ದರಿಂದ ಮಕ್ಕಳು ಮೊಬೈಲ್ ನಿಂದ ದೂರವಿದ್ದು, ಬೇಸಿಗೆ ಶಿಬಿರದಲ್ಲಿ ತಮ್ಮನ್ನು ಅತ್ಯಂತ ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು ಎಂದು ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಿವೃತ ದೈಹಿಕ ಶಿಕ್ಷಕರಾದ ಗಣೇಶ್ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಹೆಚ್ಚು ಜ್ಞಾನವನ್ನು ಪಡೆಯಬಹುದಾಗಿದೆ. ಮಕ್ಕಳು ಅತ್ಯಂತ ಶ್ರದ್ಧೆಯಿಂದ ಹಾಗೂ ಶಿಸ್ತಿನಿಂದ ಬೇಸಿಗೆ ಶಿಬಿರದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಚಿತ್ತಾರ ವಾಹಿನಿ ವರದಿಗಾರ ಶಿವರಾಜ್ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಪೋಷಕರು ಪ್ರೋತ್ಸಾಹ ನೀಡಬೇಕು. ಬೇಸಿಗೆ ಶಿಬಿರದಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಮಕ್ಕಳು ಭಾಗವಹಿಸಿರುವುದು ಸಂತೋಷ. ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯು ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಶುಭಹಾರೈಸಿದರು.
ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಸಂಯೋಜಕರಾದ ಅಕ್ತರ್ ಮಾತನಾಡಿ, ಮಕ್ಕಳಿಗೆ ಬೇಸಿಗೆ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ನಂತರ ನೃತ್ಯ ಶಾಲೆಯ ಬೆಳವಣಿಗೆಗೆ ಸಹಕರಿಸಿದವರಿಗೆ ಧನ್ಯವಾದಗಳು ತಿಳಿಸಿದರು.
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿನಿಯಾದ ರಂಜಿನಿ ನಿರೂಪಿಸಿದರು. ವಿದ್ಯಾರ್ಥಿನಿ ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿದರು. ಬೇಸಿಗೆ ಶಿಬಿರದಲ್ಲಿ 70ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.