ಸೋಮವಾರಪೇಟೆ ಏ.3 : ದೊಡ್ಡಮಳ್ತೆ ಗ್ರಾಮ ವ್ಯಾಪ್ತಿಯ ರಸ್ತೆ ಮತ್ತು ಚರಂಡಿ ಎರಡು ದಶಕಗಳಿಂದ ಅವ್ಯವಸ್ಥೆಯಿಂದ ಕೂಡಿದ್ದು, ಈ ತಿಂಗಳ ಅಂತ್ಯದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಇದಕ್ಕೂ ಸ್ಪಂದಿಸದಿದ್ದಲ್ಲಿ ಚುನಾವಣಾ ಬಹಿಷ್ಕರಿಸಲಾಗುವುದೆಂದು ದೊಡ್ಡಮಳ್ತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಪ್ರಮುಖ ಡಿ.ಆರ್.ಪುಟ್ಟರಾಜು, ಕಳೆದ ಎರಡು ದಶಕಗಳಿಂದ ಐತಿಹಾಸಿಕ ಹೊನ್ನಮ್ಮನ ಕೆರೆಯಿಂದ ಸುತ್ತಮುತ್ತಲ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಎಷ್ಟೇ ಮನವಿ ಸಲ್ಲಿಸಿದರು ಅನುದಾನ ಕಲ್ಪಿಸಿಲ್ಲ ಎಂದು ದೂರಿದರು.
ದೊಡ್ಡಮಳ್ತೆ ಹೊನ್ನಮ್ಮನ ಕೆರೆ ಮಾರ್ಗವಾಗಿ ಸುಳಿಮಳ್ತೆ, ದೊಡ್ಡಮಳ್ತೆ, ಮೂಕನ ಕಟ್ಟೆ, ಬಳಗೇರಿ ಬಸವಣ್ಣ ದೇವಾಲಯ ಸಂಪರ್ಕ ರಸ್ತೆಗಳು ತೀರಾ ಹಾಳಾಗಿದ್ದು, ಬಾಡಿಗೆ ವಾಹನಗಳು ಈ ರಸ್ತೆಗಾಗಿ ಬರುತ್ತಿಲ್ಲ. ಇದರಿಂದ ಕೂಲಿ ಕಾರ್ಮಿಕರು, ಜನಸಾಮಾನ್ಯರಿಗೆ ತೊಂದರೆ ಆಗಿದೆ. ಬಾಡಿಗೆಗೆ ದುಬಾರಿ ಹಣ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಕಳೆದ ಇಪ್ಪತ್ತು ವರ್ಷದಿಂದ ದುರಸ್ತಿ ಕಾಣದ ಈ ರಸ್ತೆಯನ್ನು ಸರಿ ಪಡಿಸಲು ಏ.30 ರವರೆಗೆ ಸಮಯಾವಕಾಶ ನೀಡಲಾಗುವುದು. ಸಮಸ್ಯೆ ಪರಿಹರಿಸದಿದ್ದಲ್ಲಿ ಮೇ.1 ರಂದು ಸೋಮವಾರಪೇಟೆಯ ಗಾಂಧಿ ಪ್ರತಿಮೆ ಎದುರು ಅಹೋ ರಾತ್ರಿ ಧರಣಿ ನಡೆಸಲಾಗುವುದು. ಇದಕ್ಕೂ ಸ್ಪಂದಿಸದಿದ್ದಲ್ಲಿ ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಡಿ.ಕೆ.ತಿಮ್ಮಯ್ಯ, ಡಿ.ಎಸ್.ನಿರಂಜನ್, ಡಿ.ಸಿ ಶಶಿಕುಮಾರ್, ಡಿ.ಜೆ.ನವೀನ್ ಹಾಜರಿದ್ದರು.









