ಮಡಿಕೇರಿ ಏ.3 : ವಿಧಾನಸಭಾ ಚುನಾವಣೆಯ ದಿನಾಂಕ ಈಗಾಗಲೇ ಪ್ರಕಟಗೊಂಡಿದ್ದು, ಸ್ಪರ್ಧಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗದೆ ಯೋಗ್ಯರಿಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವಂತೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಎನ್.ಯೋಗೇಶ್ ಕುಮಾರ್ ಕರೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚುನಾವಣೆ ಬಂದಾಗಲೆಲ್ಲ ದುರ್ಬಲರು, ಅನಕ್ಷರಸ್ಥರು, ಕಡು ಬಡವರು ಹಾಗೂ ಅಮಾಯಕರ ಮತಗಳನ್ನು ಹಣದಿಂದ ಅಳೆಯಲಾಗುತ್ತದೆ. ಮತ ಖರೀದಿಯ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು ನೊಂದವರ ಸಮಸ್ಯೆಗಳಿಗೆ ಸ್ಪಂದಿಸದೆ ಕಡೆಗಣಿಸುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಮತದಾರ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆ ಸಂದರ್ಭ ರಾಜಕಾರಣಿಗಳಿಗೆ ಪ್ರಜೆಗಳೇ ಪ್ರಭುಗಳಾಗುತ್ತಾರೆ. ಇಲ್ಲದ ಆಮಿಷಗಳನ್ನೊಡ್ಡಿ ಹಾದಿ ತಪ್ಪಿಸುತ್ತಾರೆ. ಇದರಿಂದ ಪ್ರಶ್ನೆ ಮಾಡುವ ಹಕ್ಕನ್ನೇ ಕಳೆದುಕೊಳ್ಳುವ ಮತದಾರ ಅಭಿವೃದ್ಧಿ ಶೂನ್ಯ ಆಡಳಿತದಿಂದ ಪರಿತಪಿಸಬೇಕಾಗುತ್ತದೆ. ಸಮಸ್ಯೆಗಳಿದೆ ಎಂದು ಗೆದ್ದವರ ಬಳಿ ಜನ ಹೋದರೆ ಹಣ ನೀಡಿ ಗೆದ್ದಿದ್ದೇನೆ ಎನ್ನುವ ಅಹಂ ಪ್ರದರ್ಶಿಸುತ್ತಾರೆ. ಒಂದು ನಿಮಿಷ ಮಾಡುವ ತಪ್ಪಿನಿಂದ ಇಡೀ ಐದು ವರ್ಷ ಕೊರತೆಗಳ ನಡುವೆ ನೋವು ಅನುಭವಿಸಬೇಕಾಗುತ್ತದೆ.
ಜಾತಿ ಆಧಾರದಲ್ಲಿ ಮತಗಳನ್ನು ಸೆಳೆಯುವ ಮತ್ತು ವಿಭಜಿಸುವ ಕಾರ್ಯಗಳಾಗುತ್ತದೆ. ಗೆಲುವಿಗಾಗಿ ಹಣ ಹಾಗೂ ಮದ್ಯದ ಹೊಳೆ ಹರಿಯುತ್ತದೆ. ಆಣೆ, ಪ್ರಮಾಣಗಳ ತಂತ್ರಗಾರಿಕೆ ನಡೆಯುತ್ತದೆ. ಒಂದು ಕ್ಷಣ ಇದೆಲ್ಲದಕ್ಕೂ ಮರುಳಾದರೆ ನಿಮ್ಮ ಕ್ಷೇತ್ರ ಐದು ವರ್ಷ ಅನಾತವಾಗುತ್ತದೆ ಎನ್ನುವುದನ್ನು ಮತದಾರ ಮನವರಿಗೆ ಮಾಡಿಕೊಳ್ಳಬೇಕೆಂದು ಯೋಗೇಶ್ ಕುಮಾರ್ ಮನವಿ ಮಾಡಿದ್ದಾರೆ.
ಒಂದು ಚುನಾವಣೆ ಗೆಲ್ಲುವುದಕ್ಕಾಗಿ ಕೋಟಿ, ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಇಷ್ಟೊಂದು ಹಣವನ್ನು ಬೆವರು ಸುರಿಸಿ ಸಂಪಾದಿಸಿದರೇ ಎನ್ನುವ ಪ್ರಶ್ನೆಯನ್ನು ಮತದಾರ ರಾಜಕಾರಣಿಗಳ ಮುಂದಿಡಬೇಕಾಗುತ್ತದೆ. ಅಗತ್ಯ ವಸ್ತುಗಳ ಖರೀದಿಯ ಸಂದರ್ಭ ಬಡವನಿಂದ ಹಿಡಿದು ಶ್ರೀಮಂತನವರೆಗೆ ಒಂದಿಲ್ಲ ಒಂದು ರೀತಿಯಲ್ಲಿ ತೆರಿಗೆ ಪಾವತಿಸುತ್ತಾನೆ. ಪೋಲಾಗುವ ಅಕ್ರಮ ಸಂಪಾದನೆಯ ಹಣ ಕಷ್ಟಪಟ್ಟು ಜನ ಪಾವತಿಸಿದ ತೆರಿಗೆಯೇ ಆಗಿರುತ್ತದೆ. ಒಂದು ಮತ ಮಾರಾಟದಿಂದ ಇಡೀ ವ್ಯವಸ್ಥೆಯೇ ಮಾರಾಟವಾದಂತ್ತಾಗುತ್ತದೆ. ಆದ್ದರಿಂದ ಯಾವುದೇ ಆಮಿಷ, ಒತ್ತಡ, ಪ್ರಭಾವ, ಆಣೆ, ಪ್ರಮಾಣಗಳಿಗೆ ಮತವನ್ನು ಮಾರಿಕೊಳ್ಳದೆ ಪ್ರಾಮಾಣಿಕರು ಹಾಗೂ ಯೋಗ್ಯರಿಗೆ ಮತ ನೀಡುವ ಮೂಲಕ ನೈಜ ದೇಶಭಕ್ತಿಯನ್ನು ಪ್ರದರ್ಶಿಸಬೇಕೆಂದು ಯೋಗೇಶ್ ಕುಮಾರ್ ಮನವಿ ಮಾಡಿದ್ದಾರೆ.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*