ಮಡಿಕೇರಿ ಏ.5 : ಪೊನ್ನಂಪೇಟೆ ತಾಲ್ಲೂಕು ಹುದಿಕೇರಿ ಗ್ರಾ.ಪಂ.ವ್ಯಾಪ್ತಿಯ ಬೆಳ್ಳೂರು ಗ್ರಾಮದ ಹೆಮ್ಮಾಡು ಕಾಲೋನಿಯಲ್ಲಿ ಕುಡಿಯುವ ನೀರಿನ ಬವಣೆಯನ್ನು ಪರಿಹರಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಸಂಬಂಧಿಸಿದಂತೆ ಇತ್ತೀಚೆಗೆ ಸಾರ್ವಜನಿಕರು ಜಿಲ್ಲಾಡಳಿತ ಗಮನಕ್ಕೆ ತಂದಿದ್ದರು. ಆ ದಿಸೆಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಿದ್ದರು.
ಅದರಂತೆ ಪೊನ್ನಂಪೇಟೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಸ್ಥಳದಲ್ಲಿಯೇ ‘ನಾನ್ ರಿಟರ್ನ್ ವಾಲ್’ ನಿಂದ ಸಮಸ್ಯೆ ಉಂಟಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಿ ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್ ತಿಳಿಸಿದ್ದಾರೆ.









