ಮಡಿಕೇರಿ ಏ.10 : ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿಯ ಬೇಂಗೂರು ಗ್ರಾಮದಲ್ಲಿ ಪ್ರಾಯೋಗಿಕವಾಗಿ ಬಾಣೆ ಜಮೀನುಗಳಿಗೆ ಕಂದಾಯ ನಿಗದಿ ಮಾಡಲು ಸರ್ವೆ ಕಾರ್ಯ ನಡೆಸುವಂತೆ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಹೊರಡಿಸಲಾಗಿರುವ ಆದೇಶಕ್ಕೆ ಸೇವ್ ಕೊಡಗು ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪದಾಧಿಕಾರಿ ಕೆ.ಬಿ.ಬೋಪಣ್ಣ, ಜನರನ್ನು ಕತ್ತಲೆಯಲ್ಲಿಟ್ಟು ಸರ್ವೆ ಕಾರ್ಯ ನಡೆಸಿದರೆ ತಡೆಯೊಡ್ಡುವುದಾಗಿ ಎಚ್ಚರಿಕೆ ನೀಡಿದರು.
ಬಾಣೆ ಜಮೀನಿಗೆ ಕಂದಾಯ ನಿಗದಿ ಮಾಡುವ ಕ್ರಮ ಸ್ವಾಗತಾರ್ಹ, ಆದರೆ ಜಿಲ್ಲೆಯ ಜನರಿಗೆ ಯಾವುದೇ ಮಾಹಿತಿಯನ್ನು ನೀಡದೆ ಮತ್ತು ಸರ್ವೆ ಪ್ರಕ್ರಿಯೆ ಬಗ್ಗೆ ವಿವರಿಸದೆ ಏಕಾಏಕಿ ಚುನಾವಣೆ ಸಂದರ್ಭದಲ್ಲಿ ಏ.1 ರಿಂದಲೇ ಸರ್ವೆ ಕಾರ್ಯ ಆರಂಭಿಸಬೇಕೆಂದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಆದೇಶ ಮಾಡಿರುವುದು ಸರಿಯಲ್ಲ. ಇದರ ಹಿಂದೆ ಡೋಂಗಿ ಪರಿಸರವಾದಿಗಳ ಒತ್ತಡವಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಕಂದಾಯ ಇಲಾಖೆ ಕಂದಾಯ ಅದಾಲತ್ ನಡೆಸುವ ಮೂಲಕ ಕಂದಾಯ ನಿಗದಿ ಮತ್ತು ಸರ್ವೆ ಕಾರ್ಯದ ಬಗ್ಗೆ ಬಾಣೆ ಜಮೀನು ಹೊಂದಿರುವವರಿಗೆ ಸಂಪೂರ್ಣ ಮಾಹಿತಿ ಒದಗಿಸಬೇಕು. ಸರ್ವೆ ಸಂದರ್ಭ ಸಂಬಂಧಿಸಿದ ಕುಟುಂಬದ ಎಲ್ಲಾ ಸದಸ್ಯರನ್ನು ಆಹ್ವಾನಿಸಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವೆ ಕಾರ್ಯಕ್ಕೆ ಮುಂದಾದರೆ ತಡೆಯೊಡ್ಡುವುದಾಗಿ ತಿಳಿಸಿದರು.
ಯಾರ ಹೆಸರಿನಲ್ಲಿ ಬಾಣೆ ಜಾಗ ಇದೆಯೋ ಅವರ ಹೆಸರಿನಲ್ಲಿ ಕಂದಾಯ ನಿಗದಿಯಾಗಬೇಕು. ಆದರೆ ಈಗ ಪಟ್ಟೆದಾರನ ಹೆಸರಿಗೆ ಕಂದಾಯ ನಿಗದಿಯಾಗುತ್ತದೆ. ಇದರಿಂದ ಬಾಣೆ ಜಾಗದ ಪಾಲು ಹೊಂದಿರುವ ಕುಟುಂಬದ ಇತರ ಸದಸ್ಯರಿಗೆ ಅನ್ಯಾಯವಾಗುತ್ತದೆ. ಪಟ್ಟೆದಾರ ಒಬ್ಬನ ಹೆಸರಿಗೆ ಮಾತ್ರ ಕಂದಾಯ ನಿಗದಿಯಾದರೆ ದುರುಪಯೋಗವಾಗುವ ಸಾಧ್ಯತೆಗಳೇ ಹೆಚ್ಚು. ಮೊದಲು ಆರ್‌ಟಿಸಿಯಲ್ಲಿ ಕುಟುಂಬದ ಸದಸ್ಯರುಗಳ ಹೆಸರು ಬರುತ್ತಿತ್ತು. ಆದರೆ ಈಗ ಪಟ್ಟೆದಾರನ ಹೆಸರು ಮಾತ್ರ ಬರುತ್ತಿದ್ದು, ಇತರ ಸದಸ್ಯರ ಹೆಸರಿಗೆ ಕಂದಾಯ ನಿಗದಿ ಮಾಡುತ್ತಿಲ್ಲ. ಅಧಿಕಾರಿಗಳು ಯಾರದ್ದೋ ಒತ್ತಡಕ್ಕೆ ಮಣಿದು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕೆ.ಬಿ.ಬೋಪಣ್ಣ ಆರೋಪಿಸಿದರು.
2013 ರಲ್ಲಿ ಬಾಣೆ ಜಾಗಕ್ಕೆ ಕಂದಾಯ ನಿಗದಿ ಮಾಡಲು ರಾಷ್ಟ್ರಪತಿಗಳು ಅಂಕಿತ ಹಾಕಿದರು. ಇಲ್ಲಿಯವರೆಗೆ ಕಂದಾಯ ನಿಗದಿಯಾಗದೆ ಇದ್ದ ಪ್ರಕರಣಕ್ಕೆ ಚುನಾವಣೆ ಸಂದರ್ಭದಲ್ಲಿ ಚಾಲನೆ ನೀಡಿದ ಉದ್ದೇಶವಾದರು ಏನು ಎಂದು ಪ್ರಶ್ನಿಸಿದ ಅವರು, ಸರ್ವಾಧಿಕಾರಿ ಧೋರಣೆಯ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಭಾಗಮಂಡಲ ಹೋಬಳಿಯ ಬೇಂಗೂರು ಗ್ರಾಮದಲ್ಲಿ ಸರ್ವೆ ಕಾರ್ಯ ನಡೆಸಲು ಉಪವಿಭಾಗಾಧಿಕಾರಿಗಳು ನೀಡಿರುವ ಆದೇಶವನ್ನು ವಾಪಾಸ್ಸು ಪಡೆಯಬೇಕು. ಚುನಾವಣೆ ಕಳೆದ ನಂತರ ಜನರಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿ ಕಂದಾಯ ನಿಗದಿ ಮತ್ತು ಸರ್ವೆ ಕಾರ್ಯ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಬಿ.ಟಿ.ದಿನೇಶ್, ಜಿನ್ನು ನಾಣಯ್ಯ, ಉದಯ ಶಂಕರ್, ಬೇಂಗೂರು ಗ್ರಾಮಸ್ಥರಾದ ಸತೀಶ್ ಬೆಳ್ಯಪ್ಪ ಹಾಗೂ ಸಂತೋಷ್ ಉಪಸ್ಥಿತರಿದ್ದರು.