ಮಡಿಕೇರಿ ಏ.10 : ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ನಿವಾಸಿಗಳಿಗೆ ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಕಳೆದ 15 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ಯಾವುದೇ ಸ್ಪಂದನೆ ನೀಡಿಲ್ಲ. ಆದ್ದರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ನಿವಾಸಿಗಳು ನಿರ್ಧರಿಸಿದ್ದಾರೆ ಎಂದು ಗ್ರಾಮದ ಪ್ರಮುಖ ಪಿ.ಎ.ಧನಂಜಯ ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಪಾಲೇಮಾಡಿಗೆ ಭೇಟಿ ನೀಡಿ ಬೇಡಿಕೆಗಳನ್ನು ಈಡೇರಿಸಬೇಕು. ತಪ್ಪಿದಲ್ಲಿ ಏ.13 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದರು.
ಕಡು ಬಡವರ ಬೇಡಿಕೆಗಳಿಗೆ ಸ್ಪಂದನೆ ನೀಡದೆ ನಿರ್ಲಕ್ಷಿಸಲಾಗುತ್ತಿದೆ. ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಇಲ್ಲಿನ ನಿವಾಸಿಗಳು ಎಚ್ಚರಿಕೆ ನೀಡಿದರೂ ಯಾವ ಅಧಿಕಾರಿಯೂ ನಮ್ಮ ನೋವನ್ನು ಆಲಿಸುತ್ತಿಲ್ಲ ಎಂದು ಆರೋಪಿಸಿದರು.









