ಸೋಮವಾರಪೇಟೆ ಏ.10 : ಶಾಂತಳ್ಳಿ ಹೋಬಳಿಯ ನಗರಳ್ಳಿ ಗ್ರಾಮದಲ್ಲಿ ಐತಿಹಾಸಿಕ ಕೂತಿನಾಡು ಸುಗ್ಗಿ ಉತ್ಸವವು ಸಾವಿರಾರು ಭಕ್ತಾಧಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.
ಕೂತಿನಾಡಿಗೆ ಸೇರಿದ 18 ಗ್ರಾಮಗಳ ನಿವಾಸಿಗಳು ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಗ್ರಾಮದೇವತೆ ಸಬ್ಬಮ್ಮ ದೇವಿಗೆ 18 ಗ್ರಾಮಗಳಲ್ಲಿ 15ದಿನಗಳ ಕಾಲ ವಿಶೇಷ ಪೂಜೆಗಳನ್ನು ಸಲ್ಲಿಸಿದ ಗ್ರಾಮಸ್ಥರು, ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಪ್ರದಕ್ಷಿಣೆ ಹಾಕಿ ಗ್ರಾಮಗಳ ಸುಭೀಕ್ಷೆ ಮಳೆ, ಬೆಳೆ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸುಮಾರು 800ವರ್ಷಗಳ ಇತಿಹಾಸವಿರುವ ಸುಗ್ಗಿ ಉತ್ಸವದಲ್ಲಿ ಗ್ರಾಮದ ನಿವಾಸಿಗಳು, ಮಹಿಳೆಯರು, ಮಕ್ಕಳು, ಹಿರಿಯರು ಭಾಗವಹಿಸಿ ಇಷ್ಟಾರ್ಥಗಳ ನೆರವೇರಿಕೆಗೆ ಗ್ರಾಮ ದೇವತೆಯನ್ನು ಪ್ರಾರ್ಥಿಸಿದರು.
ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗಲಾಯಿತು. ಬಿಲ್ಲ ರಂಗದಲ್ಲಿ ಪೂರ್ವಜರ ಜೀವನ ಪದ್ದತಿಯನ್ನು ಬಿಂಬಿಸುವ ನೃತ್ಯ ಪ್ರಾಕಾರ, ಕಡವೆ ಬೇಟೆಯಾಡುವ ಪ್ರಸಂಗ ಅಕರ್ಷಿಸಿತು.
ಕೊನೆಯಲ್ಲಿ ಕಡವೆ ಕಾಡು ಸೇರುವ ಮೂಲಕ, ಬೇಟೆಗಾರರಿಂದ ಬಚಾವಾಗುವ ದೃಶ್ಯ, ಹಿಂದಿನ ಕಾಲದ ಜನರ ಪ್ರಕೃತಿ ಪ್ರೇಮ, ಪರಿಸರ ರಕ್ಷಣೆಗೆ ಅವರ ಮಾಡಿಕೊಂಡಿದ್ದ ಕಟ್ಟುಪಾಡುಗಳನ್ನು ಸಾಂಪ್ರದಾಯಿಕ ಬಿಳಿ ಕುಪ್ಪಸ ದಟ್ಟಿಯನ್ನು ಧರಿಸಿದ್ದ ದೇವರ ಬಿಲ್ಲುಗಾರರು ಬಿಲ್ಲರಂಗದಲ್ಲಿ ಪ್ರದರ್ಶನ ಹಾಕುತ್ತ ನೆರದಿದ್ದವರಿಗೆ ತಿಳಿಸಿದರು.
ಸುಗ್ಗಿ ಕುಣಿತ, ಸುಗ್ಗಿಹಾಡುವುದು, ಬಿಲ್ಲು ತೂಗುವುದು ಸೇರಿದಂತೆ ವಿವಿಧ ಜಾನಪದ ನೃತ್ಯಗಳು ನಡೆದವು. 18 ಗ್ರಾಮಗಳ ನವ ದಂಪತಿಗಳು ಮದುವೆ ಕಾಣಿಕೆಯನ್ನು ಸಲ್ಲಿಸಿದರು. ಹರಕೆ ತಿರಿಸುವುದು ಮತ್ತು ಹರಕೆ ಮಾಡಿಕೊಳ್ಳುವ ಕಾರ್ಯಗಳು ನಡೆದವು.
ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಓಡಳ್ಳಿ ಗ್ರಾಮಗಳ ಮುಖ್ಯಸ್ಥರು ಗ್ರಾಮದೇವತೆಗೆ ಪಟ್ಟ ಒಪ್ಪಿಸಿ ಪೂಜೆ ಸಲ್ಲಿಸಿದರು.
ಸುಗ್ಗಿ ಕಟ್ಟೆಯ ಮುಖ್ಯ ರಂಗದಲ್ಲಿ ಈಡುಗಾಯಿ ಒಡೆಯಲಾಯಿತು. ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಬಿ.ಜಗದೀಶ್, ಉಪಾಧ್ಯಕ್ಷ ಸಿ.ಎಸ್.ಬೋಪಯ್ಯ, ಕಾರ್ಯದರ್ಶಿ ಕೆ.ಯು.ಜಗದೀಶ್, ಖಜಾಂಚಿ ಎನ್.ಬಿ.ಸುರೇಶ್, ಪ್ರಮುಖರಾದ ಜಿ.ಆರ್.ಸುರೇಶ್, ಬಿ.ಆರ್.ಪ್ರವೀಣ್ ಸುಗ್ಗಿಯ ಉಸ್ತುವಾರಿ ವಹಿಸಿದ್ದರು.
ಹಳ್ಳಿಯೂರು ಸತೀಶ್, ಜಕ್ಕನಳ್ಳಿ ಪ್ರಕಾಶ್, ನಗರಳ್ಳಿ ವಸಂತ್, ಎನ್.ಜಿ.ವೆಂಕಟೇಶ್, ಹೆಮ್ಮನಗದ್ದೆ ಶಶಿಕುಮಾರ್ ದೇವರ ಓಡೆಕಾರರಾಗಿ ಕೆಲಸ ಮಾಡಿದರು. ಕಳೆದ ನಿಕಟಪೂರ್ವ ಅಧ್ಯಕ್ಷ ಜೋಯಪ್ಪ, ಪದಾಧಿಕಾರಿಗಳಾದ ಪ್ರಕಾಶ್, ಈರಪ್ಪ, ರಘು ಅವರುಗಳನ್ನು ಸನ್ಮಾನಿಸಲಾಯಿತು.