ಸೋಮವಾರಪೇಟೆ ಏ.10 : ಪಟ್ಟಣದ ಮುಖ್ಯ ರಸ್ತೆಯಿಂದ ಸೋಮೇಶ್ವರ ದೇವಾಲಯದವರೆಗೆ ನಗರೋತ್ಥಾನ ಯೋಜನೆಯಡಿ ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರೀಕರಣ ಮಾಡುತ್ತಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಗುಂಡಿಬಿದ್ದ ರಸ್ತೆಯಲ್ಲೇ ರೈತರು ಎರಡು ದಶಕಗಳಿಂದ ಹೆಣಗಾಡುತ್ತಿದ್ದು, ಇಲ್ಲಿಯವರೆಗೆ ರಸ್ತೆಗೆ ಅನುದಾನ ನೀಡಿಲ್ಲ ಎಂದು ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ ಮಾಡುತ್ತಿರುವ ಸಂದರ್ಭ ಪಟ್ಟಣ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ಮೇಲೆ ಡಾಂಬರೀಕರಣ ಮಾಡುತ್ತಿರುವುದು ಹಸ್ಯಸ್ಪದ ಎಂದರು.
ನರರೋತ್ಥಾನ ಯೋಜನೆಯಲ್ಲಿ ಪಟ್ಟಣ ಪಂಚಾಯಿತಿಗೆ 2.26ಕೋಟಿ ರೂ. ಹಣ ಬಿಡುಗಡೆಯಾಗಿ 4 ತಿಂಗಳು ಕಳೆದಿದ್ದು, ಚುನಾವಣೆ ಸಂದರ್ಭದಲ್ಲಿ ಕಾಮಗಾರಿ ನಡೆಯುತ್ತಿರುವುದು ಚುನಾವಣಾ ಗಿಮಿಕ್ ಎಂದು ಟೀಕಿಸಿದ್ದಾರೆ.
ಕಳೆದ 10 ವರ್ಷಗಳ ಹಿಂದೆ 5ಕೋಟಿ ರೂ.ಗಳ ವೆಚ್ಚದಲ್ಲಿ ಮುಖ್ಯ ರಸ್ತೆ ಸೇರಿದಂತೆ ಕೆಲ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗಿದ್ದು, ಇನ್ನು 10 ವರ್ಷಗಳ ಕಾಲ ಕಾಂಕ್ರೀಟ್ ರಸ್ತೆ ಬಾಳಿಕೆ ಬರುತ್ತಿತ್ತು. ಪ್ರಶ್ನೆ ಮಾಡಬೇಕಾದ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಭಿಪ್ರಾಯ:
ಕಾಂಕ್ರೀಟ್ ರಸ್ತೆ ಸ್ವಲ್ಪ ಹಾಳಾಗಿದೆ. ಡಾಂಬರೀಕರಣ ಮಾಡಿಕೊಡುವಂತೆ ವಾರ್ಡ್ ಸದಸ್ಯರು ಕೇಳಿಕೊಂಡ ಮೇರೆ ಡಾಂಬರೀಕರಣ ಮಾಡಲಾಗಿದೆ. ಈಗ ರಸ್ತೆ ಸಂಚಾರಕ್ಕೆ ಉತ್ತಮವಾಗಿದೆ.
-ನಾಚಪ್ಪ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ.
ಸಮಸ್ಯೆ ಇದ್ದ ಕಡೆ ಕಾಮಗಾರಿ ಮಾಡಬೇಕು. ಕೆಲ ವಾರ್ಡ್‍ಗಳಲ್ಲಿ ತಡೆಗೋಡೆ ಇಲ್ಲದೆ ಮನೆಗಳು ಕುಸಿಯುವ ಹಂತದಲ್ಲಿವೆ. 7ನೇ ವಾರ್ಡ್‍ನಲ್ಲಿ ಬಡವರ ಮನೆಯೊಳಗೆ ಜಲ ಬರುತ್ತಿದ್ದು, ಇಂತಹ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಅನುದಾನವನ್ನು ಉಪಯೋಗಿಸಬೇಕು. ಕಾಂಕ್ರೀಟ್ ರಸ್ತೆ ಮೇಲೆ ಡಾಂಬರು ಎಳೆಯುವುದು ಖಂಡನೀಯ.
-ಎಚ್.ಎ.ನಾಗರಾಜು, ಅಧ್ಯಕ್ಷರು, ನಿವೇಶನ ರಹಿತರ ಹೋರಾಟ ಸಮಿತಿ.