ಸುಂಟಿಕೊಪ್ಪ ಏ.19: ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ 45ನೇ ವಾರ್ಷಿಕ ಮಹೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಏ.17 ರಂದು ಗಣಪತಿ ಹೋಮ ಮತ್ತು ಕೊಡಿ ಏರಿಸುವುದರೊಂದಿಗೆ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡಿತು. ದೀಪರಾಧನೆ ಏಳು ಸುತ್ತಿನ ಪ್ರದಕ್ಷಣೆ ಹಾಗೂ ಶ್ರೀ ಚಾಮುಂಡಿ ತಂಡದಿಂದ ಚಂಡೆ ಮೇಳ ನೆರವೇರಿತು.
ನಂತರ ಶ್ರೀ ಚಾಮುಂಡೇಶ್ವರಿ ದೇವಿಯ ಅಭಿಷೇಕ ಪೂಜೆಯೊಂದಿಗೆ ಭಕ್ತರ ಹರಕೆ ಮತ್ತು ಬೇಡಿಕೆಗಳು ನಡೆದವು ರಾತ್ರಿ ವಿವಿಧ ದೈವಗಳ ಕೋಲ ಜರುಗಿದವು.
ಮರುದಿನ ಅಜ್ಜಪ್ಪ ಕೋಲ, ವಿಷ್ಣುಮೂರ್ತಿ ಕೋಲ, ರಕ್ತೇಶ್ವರಿ ಹಾಗೂ ಚಾಮುಂಡೇಶ್ವರಿ ಕೋಲಗಳು ನೆರವೇರಿದ್ದು, ಶ್ರೀದೇವಿ ನೈವೇದ್ಯದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವವು ಸಂಪನ್ನಗೊಂಡಿತು.
ಜಾತ್ರಾಮೋಹತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣ, ವಿದ್ಯುತ್ ದೀಪಾಂಲಕಾರಗಳಿಂದ ಸಿಂಗಾರಿಸಲಾಗಿತ್ತು. ಸುತ್ತ ಮುತ್ತಲ್ಲ ಗ್ರಾಮಗಳ ಭಕ್ತರು ಮೂರು ದಿನಗಳ ಕಾಲ ನಡೆದ ವಾರ್ಷಿಕ ಮಹೋತ್ಸವದಲ್ಲಿ ಭಾಗಿಯಾಗಿದ್ದರು.