
ಮಡಿಕೇರಿ ಫೆ.21 NEWSD DESK : ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ತಾಲ್ಲೂಕು ಕೇಂದ್ರವಾಗಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಮತ್ತು ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು ರಸ್ತೆ ಕಾಲೋನಿ, ಮಾಪಿಳ್ಳೆತೋಡು ಸೇತುವೆ, ಕಾವೇರಮ್ಮ ಬಡಾವಣೆ ಮತ್ತು ಇತರ ಬಡಾವಣೆಗಳು ಒಳಗೊಂಡಂತೆ ಸಂಪೂರ್ಣ ಮುಗುಟಗೇರಿ ಗ್ರಾಮವನ್ನು ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯನ್ನಾಗಿ ಘೋಷಣೆ ಮಾಡಲಾಗಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ವಾರ್ಡ್‍ಗಳನ್ನು 2011ರ ಜನಗಣತಿಯನ್ನು ಆಧರಿಸಿ ಪುನರ್ ವಿಂಗಡಣೆ ಮಾಡಿ, ವಾರ್ಡ್‍ನ ಹೆಸರು ಹಾಗೂ ವಾರ್ಡ್ ವ್ಯಾಪ್ತಿಗೆ ಒಳಪಡುವ ಪ್ರದೇಶದ ವಿವರ ಮತ್ತು ಚೆಕ್ಕುಬಂದಿಗಳನ್ನು ವಿವರವಾಗಿ ನಮೂದಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಕರಡು ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಯನ್ನು ಅಥವಾ ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ಅದನ್ನು ಲಿಖಿತ ರೂಪದಲ್ಲಿ ಕಾರಣ ಸಹಿತವಾಗಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.









