ಮಡಿಕೇರಿ ಏ.22 : ನಾಲ್ಕುಗೋಡೆಗಳ ನಡುವಣ ಶಿಕ್ಷಣದ ಒತ್ತಡಗಳನ್ನು ಕಳೆದುಕೊಂಡು, ತಮ್ಮೊಳಗಿನ ಪ್ರತಿಭೆಗಳ ಅನಾವರಣದೊಂದಿಗೆ, ವ್ಯಕ್ತಿತ್ವದ ಬದಲಾವಣೆಯನ್ನು ಬೇಸಿಗೆ ಶಿಬಿರಗಳ ಮೂಲಕ ಮಕ್ಕಳು ಕಂಡುಕೊಳ್ಳಲು ಸಾಧ್ಯವೆಂದು ಗಣ್ಯರು ಅನಿಸಿಕೆ ವ್ಯಕ್ತಪಡಿಸಿದರು.
ಸುಳ್ಯದ ರಂಗ ಮಯೂರಿ ಕಲಾ ಶಾಲೆ, ಮಡಿಕೇರಿಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಫೀ.ಮಾ.ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಆಯೋಜಿತ ರಾಜ್ಯ ಮಟ್ಟದ ‘ಬಣ್ಣ’ ಮಕ್ಕಳ ಶಿಬಿರದಲ್ಲಿ ಪಾಲ್ಗೊಂಡ ಗಣ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
‘ಡೋಲು’ ಬಾರಿಸುವ ಮೂಲಕ ಮಕ್ಕಳ ಕನಸಿನ ‘ಬಣ್ಣ’ದ ಹಬ್ಬಕ್ಕೆ ಚಾಲನೆ ನೀಡಿದ ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ನವೀನ್ ಅಂಬೆಕಲ್ಲು, ಮಡಿಕೇರಿಯಲ್ಲಿ ಎರಡನೇ ಬಾರಿ ಆಯೋಜಿತವಾಗುತ್ತಿರುವ ಬಣ್ಣ ಶಿಬಿರದ ಮೂಲಕ, ಶಾಲಾ ಕಲಿಕೆಯನ್ನು ಮೀರಿದ ವಿವಿಧ ವಿಚಾರಗಳ ಅರಿವನ್ನು ಪಡೆದುಕೊಳ್ಳುವ0ತೆ ಮಕ್ಕಳಿಗೆ ಕರೆ ನೀಡಿದರು.
ನಗರದ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕರಾದ ಕಾಂಚನ ಕೆದಂಬಾಡಿ ಮಾತನಾಡಿ, ಶಾಲಾ ಚಟುವಟಿಕೆಗಳಲ್ಲಿ ಕಲಿಯಲು ಸಾಧ್ಯವಾಗದ ಹಲವಷ್ಟು ವಿಚಾರಗಳನ್ನು ಬಣ್ಣ ಶಿಬಿರದ ಮೂಲಕ ಮಕ್ಕಳು ಆಸಕ್ತಿಯಿಂದ ಕಲಿಯಲು ಸಾಧ್ಯವಿದೆ. ಇದರಿಂದ ನಿಶ್ಚಿತವಾಗಿ ಶಿಬಿರದ ಬಳಿಕ ಮಕ್ಕಳ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ಕಾಣಬಹುದೆಂದು ತಿಳಿಸಿ, ಶಿಬಿರದಲ್ಲಿ ರಂಗ ಚಟುವಟಿಕೆಗಳ ಬಗ್ಗೆಯೂ ಮಕ್ಕಳಲ್ಲಿ ಅರಿವನ್ನು ಮೂಡಿಸಲಾಗುತ್ತದೆ. ಈ ರಂಗ ಚಟುವಟಿಕೆ ಮಕ್ಕಳ ಕಲಿಕೆಗೂ ಸಹಕಾರಿಯಾಗುತ್ತದೆಂದು ದೃಢವಾಗಿ ನುಡಿದರು.
ಸರ್ಕಾರಿ ಪದವಿ ಪೂರ್ವ ಕಲೇಜಿನ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾದ ಚಿದಾನಂದ ಅವರು ಮಾತನಾಡಿ, ಹಿಂದೆ ಬೇಸಿಗೆ ರಜೆಯಲ್ಲಿ ಮಕ್ಕಳು ತಮ್ಮ ಬಂಧು ಬಳಗದ ಮನೆಗೆ ತೆರಳುತ್ತಿದ್ದರು. ಇಂದು ಬಿಡುವಿನ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಲು ಇಂತಹ ಶಿಬಿರಗಳು ಲಭ್ಯವಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವುದರಿಂದ ಮಕ್ಕಳ ಸುಪ್ತ ಪ್ರತಿಭೆಯ ಅನಾವರಣ ಸಾಧ್ಯವೆಂದು ತಿಳಿಸಿದರು.
ನೃತ್ಯ ತರಬೇತುದಾರರಾದ ವಿನೋದ್ ಕರ್ಕೇರ ಅವರು ಮಾತನಾಡಿ, ಒಂದೇ ಛಾವಣಿಯಡಿ ವಿವಿಧ ಕಲಾ ಪ್ರಕಾರಗಳನ್ನು ಒಳಗೊಂಡಂತೆ ತರಬೇತಿ ನೀಡುವ ಕಲ್ಪನೆಯೊಂದಿಗೆ ರೂಪು ತಳೆದ ಸಂಸ್ಥೆ ‘ರಂಗ ಮಯೂರಿ’. ಈ ಸಂಸ್ಥೆಯ ಅಡಿಯಲ್ಲಿ ನಡೆಯುವ ಬಣ್ಣ ಶಿಬಿರದಲ್ಲಿ ರಂಗ ತರಬೇತಿ, ಚಿತ್ರಕಲೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಬಗ್ಗೆ ಮಕ್ಕಳಿಗೆ ತರಬೇತಿಯನ್ನು ನೀಡುವ ಮೂಲಕ ಅವರ ವ್ಯಕ್ತಿತ್ವ ವಿಕಸನಕ್ಕೆ ಹಾದಿಯನ್ನು ಕಲ್ಪಿಸಲಾಗುತ್ತ್ತದೆಯೆಂದು ಹೇಳಿದರು.
ಪ್ರಸ್ತುತ ಶಿಕ್ಷಣವೆಂದರೆ ಕೇವಲ ಮಾಹಿತಿಯನ್ನು ನೀಡುವ ವ್ಯವಸ್ಥೆಯಾಗಿ ಮಾತ್ರ ಕಂಡು ಬರುತ್ತಿರುವ ದುರಂತವನ್ನು ನಾವು ಕಾಣುತ್ತಿದ್ದೇವೆ. ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ತುಂಬುವ ಪ್ರಯತ್ನ ನಡೆಯುತ್ತಿಲ್ಲವೆಂದು ವಿಷಾದಿಸಿ, ಇಂತಹ ಶಿಬಿರಗಳಲ್ಲಿ ಮಕ್ಕಳನ್ನು ಮುಕ್ತವಾಗಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರಲ್ಲಿನ ಕ್ರಿಯಾತ್ಮಕತೆಯನ್ನು ಉತ್ತೇಜಿಸಲಾಗುತ್ತದೆ. ಕಲಿಕೆ ಎನ್ನುವುದು ಕೇವಲ ಶಾಲೆಗಳಲ್ಲಿ ಮಾತ್ರ ದೊರಕುವಂತಹದ್ದಲ್ಲ ಅದು ಮನೆಗಳಲ್ಲಿ, ತಾಯಿಯ ಕೈಯಲ್ಲಿದೆ. ಒಬ್ಬ ‘ಶಿವಾಜಿ’ ಹುಟ್ಟುಕೊಳ್ಳಲು ಆತನ ತಾಯಿ ಕಾರಣಳಾಗುತ್ತಾಳೆಂದು ಉದಾಹರಿಸಿದ ಅವರು, ಮಕ್ಕಳ ಕಲ್ಪನೆಯ ಬಣ್ಣದ ಚಿತ್ತಾರಗಳನ್ನು ಸಾಕಾರ ಗೊಳಿಸುವ ಕ್ಯಾನ್ವಾಸ್ ‘ಬಣ್ಣ’ ಶಿಬಿರವೆಂದು ಮುಕ್ತವಾಗಿ ನುಡಿದರು.
ಶಿಬಿರದ ಆಯೋಜಕರಾದ ಲೋಕೇಶ್ ಊರುಬೈಲು ಅವರು, ಮಕ್ಕಳ ವ್ಯಕ್ತಿತ್ವ ವಿಕಸನ, ಸ್ವತಂತ್ರವಾದ ಬದುಕು, ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವುದಕ್ಕೆ ಪ್ರೇರಣೆ ನೀಡುವುದು, ಪ್ರತಿಭಾ ಅನಾವರಣ ಶಿಬಿರದ ಮೂಲ ಉದ್ದೇಶವೆಂದು ಸ್ಪಷ್ಟಪಡಿಸಿದರು.
ವೀರ ಸೇನಾನಿಗೆ ಪುಷ್ಪಾರ್ಚನೆ- ಸಭಾಂಗಣದ ಪ್ರವೇಶ ದ್ವಾರದಲ್ಲಿರುವ ಫೀ.ಮಾ.ಕೆ.ಎಂ.ಕಾರ್ಯಪ್ಪ ಪುತ್ತಳಿಗೆ ಶಿಬಿರದ ಆಯೋಜಕರು, ಅತಿಥಿಗಳು, ಶಿಬಿರಾರ್ಥಿಗಳು, ಪೋಷಕರು ಪುಷ್ಪಾರ್ಚನೆ ಮಾಡುವುದರೊಂದಿಗೆ ‘ಬಣ್ಣ’ ಶಿಬಿರಕ್ಕೆ ವಿದ್ಯುಕ್ತ ಚಾಲನೆ ದೊರಕಿತು ಶಿಬಿರ ಏಪ್ರಿಲ್ 30 ರವರೆಗೆ ನಡೆಯಲಿದೆ.