ಮಡಿಕೇರಿ ಏ.23 : ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕ ರಾಜ್ಯ ಕೊಡಗು ಜಿಲ್ಲೆಯಂತೆ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಭವಿಷ್ಯ ನುಡಿದಿದ್ದಾರೆ.
ಕೊಡ್ಲಿಪೇಟೆಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕೊಡಗು ಈಗಾಗಲೇ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿದೆ. ಚುನಾವಣೆ ನಂತರ ಕರ್ನಾಟಕ ರಾಜ್ಯ ಕೂಡ ಕಾಂಗ್ರೆಸ್ ಮುಕ್ತವಾಗಲಿದೆ ಎಂದರು.
ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸ್ಥಳೀಯ ಅಭ್ಯರ್ಥಿಗಳೇ ಸಿಕ್ಕಿಲ್ಲ, ಇಬ್ಬರೂ ಅಭ್ಯರ್ಥಿಗಳು ಹೊರಗಿನವರು, ಅವರಿಗೆ ಕ್ಷೇತ್ರಗಳ ಕನಿಷ್ಠ ಪರಿಚಯವೂ ಇಲ್ಲ ಎಂದು ಟೀಕಿಸಿದರು.
ಎಲ್ಲೋ ಬೆಳೆದು, ಅದೆಲ್ಲೋ ಉದ್ಯೋಗ, ವ್ಯವಹಾರ ಮಾಡಿಕೊಂಡು ಇರುವವರು ಇದೀಗ ಕೊಡಗು ಜಿಲ್ಲೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಬಂದಿದ್ದಾರೆ. ಇಬ್ಬರೂ ‘ಟೂರಿಂಗ್ ಟಾಕೀಸ್’ ಇದ್ದ ಹಾಗೆ. ಸ್ಥಳೀಯ ಅಭ್ಯರ್ಥಿಗಳು ಸಿಗದಿರುವುದು ಕೊಡಗು ಕಾಂಗ್ರೆಸ್ ಮುಕ್ತವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವ್ಯಂಗ್ಯವಾಡಿದರು.
ತನ್ನ ಮತದಾರರನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೇರುವುದು ಕನಸಿನ ಮಾತು. ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಸರ್ಕಾರ ರಚನೆ ಮಾಡಲಿದೆ ಎಂದು ಅಪ್ಪಚ್ಚುರಂಜನ್ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಪ್ರಮುಖರಾದ ಅಭಿಮನ್ಯು ಕುಮಾರ್, ಕೊಡ್ಲಿಪೇಟೆ ಬಿಜೆಪಿ ಘಟಕದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.










