ಮಡಿಕೇರಿ ಏ.24 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಐರಿ ಜನಾಂಗದ ಕ್ರೀಡಾಕೂಟದಲ್ಲಿ ಕೆದಮುಳ್ಳೂರು ಗ್ರಾಮದ ಮುಲ್ಲೈರಿರ ತಂಡ ಸಮಗ್ರ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಒಟ್ಟು ಏಳು ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ ಮುಲ್ಲೈರೀರ ತಂಡ ಒಟ್ಟು 120 ಅಂಕಗಳನ್ನು ಕಲೆ ಹಾಕಿ ಚೊಚ್ಚಲ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಈ ಮೂಲಕ 30 ಸಾವಿರ ರೂ ಮೌಲ್ಯದ ಅತ್ಯಾಕರ್ಷಕ ಐನ್ಮನೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಪುರುಷರ ಕ್ರಿಕೆಟ್‍ನಲ್ಲಿ ಬಲ್ಲಮಾವಟಿ ಐರೀರ ತಂಡ ಎಂಟನೇ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಫೈನಲ್ ಪಂದ್ಯದಲ್ಲಿ ಬಲ್ಲಮಾವಟಿ ತಂಡ ಮತ್ತು ಕಳೆದ ಬಾರಿಯ ಚಾಂಪಿಯನ್ ತಟ್ಟಂಡ ಬೊಮ್ಮಂಜಿಕೆರೆ ತಂಡ ಮುಖಾಮುಖಿಯಾಯಿತು.
ಮೊದಲು ಬ್ಯಾಟ್ ಮಾಡಿದ ಬಲ್ಲಮಾವಟಿ ತಂಡ 8 ಓವರ್ ಗಳಲ್ಲಿ 99 ಬೃಹತ್ ಗುರಿ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ತಟ್ಟಂಡ ತಂಡ ನಿಗಧಿತ ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 87 ರನ್ ಗಳಿಸಲಷ್ಟೇ ಶಕ್ತವಾಯಿತು.
ವಿಜೇತ ತಂಡ 20 ಸಾವಿರ ರೂ ನಗದು ಮತ್ತು ಆಕರ್ಷಕ ಟ್ರೋಫಿ ಪಡೆದರೆ, ರನ್ನರ್ ಅಪ್ ತಂಡ 15 ಸಾವಿರ ರೂ ನಗದು ಹಾಗೂ ಆಕರ್ಷಕ ಟ್ರೋಫಿ ಜಯಿಸಿತು.
ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯದಲ್ಲಿ ಬಿಟ್ಟಂಗಾಲ ಗ್ರಾಮದ ಬಹುತೇಕ ಹಿರಿಯ ಮಹಿಳೆಯರನ್ನೇ ಒಳಗೊಂಡಿದ್ದ ಆಲೇಂಗಡ ತಂಡ ಅಮ್ಮಣಂಡ ಹೊದ್ದೂರು ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ವಿಜೇತ ತಂಡ ಐದು ಸಾವಿರ ರೂ ನಗದು ಮತ್ತು ಟ್ರೋಫಿ ಮುಡಿಗೇರಿಸಿಕೊಂಡರೆ, ರನ್ನರ್ ಅಪ್ ತಂಡ ಮೂರುಸಾವಿರ ನಗದು ಮತ್ತು ಟ್ರೋಫಿ ಗೆದ್ದುಕೊಂಡಿತು.
ಉಳಿದಂತೆ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಾಳುಗೋಡು ಏಕಲವ್ಯ ವಸತಿ ಶಾಲೆ ಪ್ರಾಂಶುಪಾಲ ಐನಂಗಡ ದಿಲನ್ ಮುತ್ತಣ್ಣ, ಇತ್ತೀಚೆಗೆ ಐರಿ ಜನಾಂಗದಲ್ಲಿ ಸಾಧಕರು ಹೆಚ್ಚುತ್ತಿರುವುದು ಬಹಳ ಸಂತಸದ ವಿಷಯ ಎಂದು ಕೊಂಡಾಡಿದರು.
ಐರಿ ಜನಾಂಗದ ಏಳಿಗೆ ಮತ್ತು ಒಗ್ಗಟ್ಟಿಗೆ ನಾವೆಲ್ಲರೂ ಐರಿ ಸಮಾಜಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭ ದಿಕ್ಸೂಚಿ ಭಾಷಣ ಮಾಡಿದ ಐರಿ ಮಕ್ಕಡ ಕೂಟದ ನಿರ್ದೇಶಕ, ವಕೀಲ ಐಮಂಡ ಶಬರಿ ನಾಚಪ್ಪ, ಐರಿ ಜನಾಂಗದ ಯುವಜನತೆ ಐನ್ಮನೆ ಟ್ರೋಫಿಯಂತಹ ಕ್ರೀಡಾ ಕೂಟ ಆಯೋಜಿಸುವ ಮೂಲಕ ಜನಾಂಗದ ಬಗ್ಗೆ ತಮಗಿರುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಕೊಂಡಾಡಿದರು.
ಇದೇ ಸಂದರ್ಭ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಪ್ರಮುಖ ಅಗ್ನಿಶಾಮಕ ಬೊಳ್ಳನಮಂಡ ಉತ್ತಪ್ಪ. ಮುಖ್ಯಮಂತ್ರಿ ಪದಕ ವಿಜೇತ ಕೆಎಸ್‍ಆರ್‍ಟಿಸಿ ಚಾಲಕ ತಟ್ಟಂಡ್ ಸತೀಶ್, ಸಮಾಜ ಸೇವಕ ಪೊನ್ನೀರ ಸ್ನೇಕ್ ಗಗನ್, ಡಾ.ಐನಂಗಡ ದಿಲನ್ ಮುತ್ತಣ್ಣ, ಎನ್‍ಸಿಸಿ ಸಾಧಕ ಅಪ್ಪಚ್ಚಂಡ ಪ್ರಜ್ವಲ್, ಸಿನಿಮಾ ನಾಯಕ ನಟ ಮಾಲೆರ ಪ್ರಮೋದ್ ಬೋಪಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಐನಂಗಡ ಚಿತ್ರಾ ಕಾರ್ಯಪ್ಪ, ಐರಿ ಸಮಾಜ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಅಧ್ಯಕ್ಷ ಮೇಲತ್ತಂಡ ರಮೇಶ್, ಬೋಳೈರಿರ ದಿನೇಶ್, ಸೋನಿ ಶ್ರೀರಾಗ್, ರಿಚಾ ಸುಭಾಷ್, ಐರೀರಾ ತಾರಾ ವಿಜಯ್ ರೋಷನ್ ಸುಬ್ಬಯ್ಯ ಸೇರಿದಂತೆ ಹಲವು ಗಣ್ಯ ಉಪಸ್ಥಿತರಿದ್ದರು.