ಮಡಿಕೇರಿ ಏ.24 : ಕೊಡಗು ಜಿಲ್ಲೆಯ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ತಂತ್ರಾಂಶ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಚಾಲನೆ ನೀಡಿದರು.
ನಗರದ ಉಪ ನೋಂದಾಣಾಧಿಕಾರಿ ಕಚೇರಿಯಲ್ಲಿ ಕಾವೇರಿ-2 ತಂತ್ರಾಂಶ ಅನುಷ್ಠಾನಕ್ಕೆ ಚಾಲನೆ ನೀಡಿ ಮಾಹಿತಿ ಪಡೆದರು.
ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ ಅವರು ಮಾತನಾಡಿ ಕಾವೇರಿ-2.0 ತಂತ್ರಾಂಶದಲ್ಲಿ ದಸ್ತಾವೇಜಿನ ನೋಂದಣಿಯಲ್ಲಿ ಆನ್‍ಲೈನ್ ಮೂಲಕ ಸೇವೆಗಳನ್ನು ಪಡೆಯಲು https://kaveri.karnataka.gov.in ಪೋರ್ಟಲ್‍ನಲ್ಲಿ ಯೂಸರ್ ಐಡಿ ಸೃಜಿಸಿ ಲಾಗಿನ್ ಆಗಬೇಕು ಎಂದರು.
ನಂತರ ‘ದಸ್ತಾವೇಜು ನೋಂದಣಿ’ ಸೇವೆಯನ್ನು ಪೋರ್ಟಲ್‍ನಲ್ಲಿ ಆಯ್ಕೆ ಮಾಡಿಕೊಂಡು ತಂತ್ರಾಂಶ ಕೇಳುವ ಮಾಹಿತಿಯನ್ನು ನಮೂದು ಮಾಡಬೇಕು. ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ಉಪ ನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕು. ನೋಂದಾಯಿಸಬೇಕಾದ ದಸ್ತಾವೇಜನ್ನು 5 ಎಂಬಿ ಮೀರದಂತೆ, ಪಿಡಿಎಫ್ ಮಾದರಿಯಲ್ಲಿ ಸ್ಕ್ಯಾನ್ ಮಾಡಿಕೊಳ್ಳಬೇಕು. ಅಪ್‍ಲೋಡ್ ಮಾಡಲಾದ ದಸ್ತಾವೇಜು ಮತ್ತು ಭೌತಿಕ ಪ್ರತಿಗಳಿಗೂ ಯಾವುದೇ ವ್ಯತ್ಯಾಸಗಳಿರಬಾರದು ಎಂದು ತಿಳಿಸಿದರು.
ಸಲ್ಲಿಸಿರುವ ಮಾಹಿತಿಯನ್ನು ಉಪ ನೋಂದಣಾಧಿಕಾರಿಗಳು ಪರಿಶೀಲಿಸಿ ದಸ್ತಾವೇಜಿನ ನೋಂದಣಿಗೆ ಪಾವತಿಸಬೇಕಾಗಿರುವ ಶುಲ್ಕಗಳ ವಿವರವನ್ನು ಆನ್‍ಲೈನ್ ಮುಖಾಂತರ ನಿಮ್ಮ ಲಾಗಿನ್‍ಗೆ ತಿಳಿಸುತ್ತಾರೆ.
ಆಯ್ಕೆ ಮಾಡಿಕೊಂಡ ನಿರ್ದಿಷ್ಟ ದಿನಾಂಕದಂದು ಉಪ ನೋಂದಣಾಧಿಕಾರಿಗಳ ಮುಂದೆ ಭೌತಿಕ ದಸ್ತಾವೇಜಿನೊಂದಿಗೆ ಪಕ್ಷಕಾರರು ಹಾಗೂ ಸಾಕ್ಷಿಗಳು ಹಾಜರಾಗಬೇಕು. ಉಪನೋಂದಣಾಧಿಕಾರಿಗಳು ಹಾಜರಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಭಾವಚಿತ್ರ ಹಾಗೂ ಹೆಬ್ಬೆಟ್ಟಿನ ಗುರುತು ಪಡೆಯಲು ನಿರ್ದಿಷ್ಟ ಕೌಂಟರನ್ನು ನಿಮಗೆ ನಿಗದಿ ಮಾಡುತ್ತಾರೆ ಎಂದು ಸಿದ್ದೇಶ ಅವರು ವಿವರಿಸಿದರು.
ನಿಮ್ಮ ಲಾಗಿನ್ ಮೂಲಕ ನಿಗಧಿತ ಶುಲ್ಕವನ್ನು ಆನ್‍ಲೈನ್ ಮೂಲಕ ಭರಿಸಬೇಕು. ನಂತರ ನೋಂದಣಿಗೆ/ ಕಚೇರಿಗೆ ಭೇಟಿ ನೀಡಲು ನಿರ್ದಿಷ್ಟ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬೇಕು.
ನಿಮಗೆ ನಿಗಧಿ ಪಡಿಸಿರುವ ಕೌಂಟರ್‍ನಲ್ಲಿ ಹಾಜರಾದ ನಂತರ ನಿಮ್ಮ ಭಾವಚಿತ್ರ ಹಾಗೂ ಹೆಬ್ಬೆಟ್ಟಿನ ಗುರುತನ್ನು ಪಡೆಯಲಾಗುವುದು. ನಂತರ ನಮಗೆ ಒದಗಿಸಲಾಗುವ ಸಮ್ಮರಿ ರಿಪೋರ್ಟ್‍ನಲ್ಲಿರುವ ಮಾಹಿತಿಯನ್ನು ಪರಿಶೀಲಿಸಿ ಸಹಿ ಮಾಡಬೇಕು ಎಂದು ತಿಳಿಸಿದರು.
ಉಪ ನೋಂದಣಾಧಿಕಾರಿಗಳು ದಸ್ತಾವೇಜನ್ನು ನೋಂದಣಿ ಮಾಡಿದ/ಪೆಂಡಿಂಗ್ ಇಟ್ಟ ನಂತರ ನಿಗದಿತ ಕೌಂಟರ್‍ನಲ್ಲಿ ದಸ್ತಾವೇಜಿನಲ್ಲಿ ಹಿಂಬರಹದ (ಎಂಡೋರ್ಸ್‍ಮೆಂಟ್) ಪ್ರಿಂಟ್ ತೆಗೆಯುತ್ತಾರೆ. ದಸ್ತಾವೇಜಿನ ಹಿಂಬರಹದಲ್ಲಿ ಪಕ್ಷಕಾರರು, ಸಾಕ್ಷಿಗಳು ಹಾಗೂ ಉಪ ನೋಂದಣಾಧಿಕಾರಿಗಳು ಸಹಿ ಮಾಡಬೇಕು. ಸಹಿ ಮಾಡಿದ ದಸ್ತಾವೇಜನ್ನು ಸ್ಕ್ಯಾನ್ ಮಾಡಿದ ನಂತರ ಉಪ ನೋಂದಣಾಧಿಕಾರಿಗಳು ಡಿಜಿಟಲ್ ಸಹಿ ಮಾಡುತ್ತಾರೆ. ನಂತರ ಸ್ವೀಕೃತಿಯಲ್ಲಿ ಸಹಿ ಮಾಡಿ ನಿಮ್ಮ ನೋಂದಣಿಯಾದ ದಸ್ತಾವೇಜನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080-68265316 ನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ ಅವರು ವಿವರಿಸಿದ್ದಾರೆ.









