ಮಡಿಕೇರಿ ಏ.24 : ತಳಭಾಗದಿಂದ ನೋಡಿದರೆ ಸುತ್ತಲೂ ಕಾಡು., ಕಾಫಿ ತೋಟಗಳ ಮಧ್ಯೆ ತಿರು ತಿರುಗಿ ಹೋಗಿರುವ ಅಂಕು ಡೊಂಕಾದ ದಾರಿ., ಸೇರಬೇಕಾದ ಜಾಗ ದೂರ.., ಅಬ್ಬಾ ಅಷ್ಟೊಂದು ದೂರ ಇದ್ಯಾ., ಹೇಗಪ್ಪ ಹತ್ತೊದು..? ಸುಡುತ್ತಿರುವ ಬಿಸಿಲು ಬೇರೆ.., ಹೆಗಲ ಮೇಲೊಂದು ಬ್ಯಾಗು…, ಯೋಚಿಸುತ್ತಿರುವಂತೆಯೇ ನೋಡ ನೋಡುತ್ತಲೇ ತಂಡೊಪತಂಡವಾಗಿ ಎಲ್ಲರೂ ಹತ್ತಿಯೇ ಬಿಟ್ಟರು., ಆರು ವರ್ಷದ ಪುಟಾಣಿಯಿಂದ ಹಿಡಿದು ಎಪ್ಪತ್ತುವರ್ಷದವರೆಗಿನವರು ಕೂಡ ಯಾವುದೇ ಆಯಾಸವಿಲ್ಲದೆ ಬೆಟ್ಟವನ್ನೇರಿ ತಂಪಾದ ಪ್ರದಶದಲ್ಲಿ ದಣಿವಾರಿಸಿಕೊಂಡರು. ಅಷ್ಟೇ ಸಲೀಸಾಗಿ ಬೆಟ್ಟವವನ್ನಿಳಿದು ಚಾರಣವನ್ನು ಪೂರ್ಣಗೊಳಿಸಿದರು..!
ಮಡಿಕೇರಿಯ ವಾಂಡರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಏರ್ಪಡಿಸಲಾಗಿರುವ ಉಚಿತ ಬೇಸಿಗೆ ಕ್ರೀಡಾ ಶಿಬಿರದ ಅಂಗವಾಗಿ ಶಿಬಿರಾರ್ಥಿಗಳಿಗೆ ಚಾರಣ ಹಮ್ಮಿಕೊಳ್ಳಲಾಗಿತ್ತು. ಮಡಿಕೇರಿಯಿಂದ ಬಸ್ಸಿನಲ್ಲಿ ಹೊರಟು ಕರಡದಿಂದ ಕಾಲ್ನಡಿಗೆ ಮೂಲಕ ಮಲೆತಿರಿಕೆ ಬೆಟ್ಟಕ್ಕೆ ಚಾರಣವಿತ್ತು. ಸುಮಾರು 120 ಮಕ್ಕಳು ಹಾಗೂ ಪೋಷಕರು ಮತ್ತು ತರಬೇತುದಾರರಾದಿಯಾಗಿ 135 ಮಂದಿ ಪಾಲ್ಗೊಂಡಿದ್ದರು. ಸುಡುವ ಬಿಸಿಲನ್ನು ಲೆಕ್ಕಿಸದೆ ಮಕ್ಕಳು ಹಾಗೂ ಪೋಷಕರು ಬೆಟ್ಟವನ್ನೇರಿದರು. ಕೆಲವರಿಗೆ ಚಾರಣದ ಅಭ್ಯಾಸವಿಲ್ಲದಿದ್ದರೂ ಸುಧಾರಿಸಿಕೊಂಡು ಎಲ್ಲರ ಜೊತೆಯಲ್ಲಿ ಹೆಜ್ಜೆ ಹಾಕಿದರು. ಪ್ರಕೃತಿಯ ವಿಹಂಗಮ ನೋಟದ ಸಿರಿಯನ್ನು ಆಸ್ವಾದಿಸಿದರಲ್ಲದೆ, ಪ್ರಕೃತಿಯ ಮಡಿಲಲ್ಲಿ ಸಿಕ್ಕಿದ ಗೊಟ್ಟೆಹಣ್ಣು, ಗುಮ್ಮಟೆ, ಚುಂಡೆ ಹಣ್ಣು, ನುಚ್ಚಟೆ ಹಣ್ಣುಗಳ ಸವಿಯುಂಡು ಸಂಭ್ರಮಿಸಿದರು.
ತುತ್ತ ತುದಿಯನ್ನೇರಿದ ಬಳಿಕ ಅಲ್ಲಿ ಪ್ರಶಾಂತ ವಾತಾವರಣದಲ್ಲಿ ನೆಲೆನಿಂತಿರುವ ಅಯ್ಯಪ್ಪನ ಸ್ಥಾನದಲ್ಲಿ ಮೌನವಾಗಿ ಕುಳಿತು ಪ್ರಾರ್ಥನೆ ಸಲ್ಲಿಸಿದರಲ್ಲದೆ, ಭಜನೆ ಮಾಡಿದರು. ಆರೋಹಣ ತಂಡದ ನಾಯಕ, ಯೋಗ ಗುರು ಕೆ.ಕೆ. ಮಹೇಶ್‍ಕುಮಾರ್ ಮತ್ತು ತಂಡದವರು ಮಕ್ಕಳಿಗೆ ಭಜನೆ ಹೇಳಿಕೊಟ್ಟರು. ಮಹಾ ಮಂಗಳಾರತಿ, ಪಾಯಸ ಪ್ರಸಾದ ಸೇವನೆ ಬಳಿಕ ಬೆಟ್ಟವನ್ನಿಳಿದರು. ಬೆಟ್ಟದ ತಪ್ಪಲಿನಲ್ಲಿನ ನಡಿಕೇರಿಯಂಡ ಐನ್‍ಮನೆಯಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರ ಪತ್ನಿ ರೂಪ ಸತೀಶ್ ಅವರು ಕೂಡ ಮಕ್ಕಳೊಂದಿಗೆ ಚಾರಣದಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ವಾಂಡರ್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ, ಸಂಚಾಲಕ ಬಾಬು ಸೊಮಯ್ಯ, ತರಬೆತುದಾರರಾದ ಎಸ್.ಟಿ.ವೆಂಕಟೇಶ್, ಬೊಪ್ಪಂಡ ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು ಅವರುಗಳ ಮಾರ್ಗದರ್ಶನದಲ್ಲಿ ಮಕ್ಕಳು ಚಾರಣದಲ್ಲಿ ಪಾಲ್ಗೊಂಡಿದ್ದರು.