ಮಡಿಕೇರಿ ಏ.24 : ಕೊಡಗು ಜಿಲ್ಲೆಯಲ್ಲಿ ಏಪ್ರಿಲ್ 4ನೇ ವಾರದಲ್ಲೂ ಮಳೆಯಾಗದ ಕಾರಣ ಬರದ ಛಾಯೆ ಮೂಡಿದೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬಿಸಿಲ ಧಗೆಗೆ ಕೊಡಗಿನ ಬಹುತೇಕ ಕಡೆಗಳಲ್ಲಿ ತೋಟಗಾರಿಕಾ ಬೆಳೆಗಳು ಒಣಗಿ ಹೋಗುತ್ತಿವೆ, ಜಲಮೂಲಗಳು ಬತ್ತಿ ಹೋಗಿವೆ. ಮಕ್ಕಳಂತೆ ಸಾಕಿ ಸಲಹಿದ ಕಾಫಿ ಗಿಡಗಳು, ಕರಿಮೆಣಸು ಬಳ್ಳಿಗಳು ಕಣ್ಣು ಮುಂದೆಯೇ ಒಣಗುತ್ತಿದ್ದು, ಬೆಳೆಗಾರರು ಅಸಹಾಯಕರಾಗಿ ಕೈಕಟ್ಟಿ ಕೂರಬೇಕಾದ ಸ್ಥಿತಿ ತಲೆದೋರಿದೆ. ತೋಟಕ್ಕೆ ನೀರು ಹಾಯಿಸಲು ಇರುವ ಕೆರೆಗಳು, ನದಿಗಳಲ್ಲೂ ನೀರು ಬತ್ತಿ ಹೋಗಿದ್ದು, ಬೆಳೆಗಾರರು ಆಕಾಶದ ಕಡೆ ಮುಖ ಮಾಡಿ ಮಳೆಯನ್ನು ಎದುರು ನೋಡುತ್ತಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಪೂಕೋಳ, ಪರಕಟಗೇರಿ, ನೆಮ್ಮಲೆ, ಕುರ್ಚಿ, ಬೀರುಗ, ಟಿ.ಶೆಟ್ಟಿಗೇರಿ, ಹರಿಹರ ಬಾಡಗರಗೇರಿ, ತೆರಾಲು, ಬಿರುನಾಣಿ, ಶ್ರೀಮಂಗಲ, ನಾಲ್ಕೇರಿ, ಮಂಚಲ್ಲಿ, ಪೂಜೆಕಲ್, ಕುಟ್ಟ, ಹೈಸೊಡ್ಲೂರು, ಬೆಳ್ಳೂರು, ಕುಮಟೂರು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕಾಫಿ, ಕರಿಮೆಣಸು, ಅಡಿಕೆ ಸೇರಿದಂತೆ ಇತರ ಬೆಳೆಗಳು ಬಿಸಿಲಿನ ಬೇಗೆಗೆ ಬೆಂದು ಕರಕಲಾಗಿದ್ದು, ಬೆಳೆಗಾರರು ಕಂಗಾಲಾಗುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಅಧಿಕ ಮಳೆಯಾಗುವಂತಹ ಪ್ರದೇಶಗಳಲ್ಲೂ ಸಹ ಈ ವರ್ಷ ವಾಡಿಕೆ ಮಳೆಯಾಗದೇ ಇರುವುದರಿಂದ ಬಿಸಿಲಿನ ತಾಪದಲ್ಲಿ ಏರಿಕೆಯಾಗಿದ್ದು, ಜಲಮೂಲಗಳು ಒಣಗಿವೆ. ಪೊನ್ನಂಪೇಟೆ ತಾಲೂಕಿನ ಹಾತೂರು, ಕುಂದಾ, ಈಚೂರು, ಬಿ. ಶೆಟ್ಟಿಗೇರಿ, ಹಳ್ಳಿಗಟ್ಟು, ಬಿ. ಬಾಡಗ, ಕುಟ್ಟಂದಿ, ಕೊಂಗಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಬಿಸಿಲಿನ ಝಳಕ್ಕೆ ಕಾಫಿಗಿಡಗಳು ಸುಟ್ಟು ಕರಕಲಾಗುತ್ತಿರುವ ಬೆನ್ನಲ್ಲೇ ಇದೀಗ ಅಧಿಕ ಮಳೆ ಸುರಿಯುವ ಶ್ರೀಮಂಗಲ ಹೋಬಳಿಯಲ್ಲೂ ಕಾಫಿಗಿಡಗಳು ಬೆಂದು ಹೋಗುತ್ತಿರುವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.
ನೀರಿನ ಮೂಲಗಳಾದ ಕೆರೆಕಟ್ಟೆಗಳು ಒಣಗಿ ನಿಂತಿದ್ದು, ಜನ ಜಾನುವಾರುಗಳು, ಪ್ರಾಣಿ ಪಕ್ಷಿಗಳು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಾಫಿತೋಟಗಳು ಬಿಸಿಲಿನ ತಾಪಕ್ಕೆ ಸುಟ್ಟು ಕರಕಲಾಗಿದ್ದು, ಇದರೊಂದಿಗೆ ಕರಿಮೆಣಸು, ಬಾಳೆ, ಇನ್ನಿತರ ಫಸಲುಗಳು ಬೆಂದುಹೋಗಿವೆ. ಕಾಫಿತೋಟಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ. ಪ್ರಸ್ತುತ ಕಾಫಿಗೆ ಉತ್ತಮ ಧಾರಣೆಯಿದೆ. ಬಿಸಿಲಿನ ತಾಪಕ್ಕೆ ಸುಟ್ಟು ಮುರುಟಿ ಹೋಗುತ್ತಿರುವ ಕಾಫಿ ಗಿಡಗಳಿಂದ ಮುಂದಿನ ವರ್ಷದ ಫಸಲನ್ನು ನಿರೀಕ್ಷಿಸುವುದು ಅಸಾಧ್ಯವಾಗಿದೆ. ಹೊಸಗಿಡಗಳನ್ನು ನೆಟ್ಟು ಉತ್ತಮ ಫಸಲು ಪಡೆಯಲು ಸುಮಾರು ಇಪ್ಪತ್ತು ವರ್ಷಗಳು ತಗಲುವುದರಿಂದ ಕಾಫಿ ಬೆಳೆಗಾರರು ಆರ್ಥಿಕ ಹೊಡೆತಕ್ಕೆ ಸಿಲುಕುವುದರಲ್ಲಿ ಸಂದೇಹವಿಲ್ಲ. ಮಾತ್ರವಲ್ಲದೆ ಮುಂದಿನ ವರ್ಷದ ಕಾಫಿ ಉತ್ಪಾದನೆಯ ಮೇಲೆ ಭಾರೀ ಅಡ್ಡ ಪರಿಣಾಮ ಬೀರಲಿದ್ದು, ಇಳುವರಿ ಕುಸಿಯುವ ಸಾಧ್ಯತೆಗಳು ನಿಚ್ಚಳವಾಗಿದೆ.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*