ವಿರಾಜಪೇಟೆ ಏ.25 : ವಿರಾಜಪೇಟೆ ಪಟ್ಟಣದಲ್ಲಿರುವ ಸೆಂಟ್ ಆನ್ಸ್ ಪದವಿ ಕಾಲೇಜು ಕಾಮರ್ಸ್ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿದ್ದು, ಇಲ್ಲಿ ಕಾಮರ್ಸ್ ಶಿಕ್ಷಣದಲ್ಲಿ ಎರಡು ವಿಭಾಗಗಳಿದೆ. ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣವನ್ನು ಪಡೆಯಲು ಎಲ್ಲಾ ರೀತಿಯಲ್ಲಿಯೂ ಅವಕಾಶಗಳಿವೆ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಐಸಾಕ್ ರತ್ನಕರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರೆ.ಫಾ.ಐಸಾಕ್ ರತ್ನಾಕರ್ ವಿಶ್ವವಿದ್ಯಾನಿಲಯ ಮಟ್ಟದ ಸೆಮಿಸ್ಟರ್ ಪರೀಕ್ಷೆಗಳಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿರುವುದು ಗಮನಾರ್ಹವಾಗಿದೆ. ಅದರ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗಿ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳು, ವಿಚಾರ ಸಂಕೀರ್ಣಗಳು, ಕಾರ್ಪೋರೇಟ್ ರಸಪ್ರಶ್ನೆ, ಕ್ಯಾಂಪಸ್ ಸೆಲೆಕ್ಷನ್ ಮುಂತಾದ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ನಿರಂತರವಾಗಿ ಪ್ರತಿವರ್ಷ ಇಂಡಸ್ಟ್ರಿಯಲ್ ವಿಸಿಟ್ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪದವಿ ಪ್ರಾಂಶುಪಾಲೆ ಮಾಳೇಟಿರ ತೃಪ್ತಿ ಬೋಪಣ್ಣ ಮಾಹಿತಿ ನೀಡಿ ಇಲ್ಲಿ ಬಿಬಿಎ, ಬಿ.ಎಸ್ಸಿ, ಬಿಸಿಎ ಕೋರ್ಸುಗಳಿದ್ದು, ಈ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಆರಂಭಗೊಂಡಿರುತ್ತದೆ. ಕಾಲೇಜಿನಲ್ಲಿ ಕಾಮರ್ಸ್ ಪದವಿ ಶಿಕ್ಷಣವು ಹೆಸರುವಾಸಿಯಾಗಿದ್ದು ಕಾಲೇಜು ವೇಳೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಪ್ರವೇಶಾತಿಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.









