ನಾಪೋಕ್ಲು ಏ.25 : ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ ಅಧಿಕವಾಗಿರುವ ಬೆನ್ನಲ್ಲೇ ನಾಪೋಕ್ಲು ಸುತ್ತಮುತ್ತಲಿನ ಪ್ರದೇಶಗಳಿಗೆ ಗುಡುಗು ಸಹಿತ ಒಂದು ಇಂಚಿಗೂ ಅಧಿಕ ಮಳೆಯಾಗಿದೆ.
ಮಂಗಳವಾರ ಮಧ್ಯಾಹ್ನ ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕೈಕಾಡು, ಬೇತು, ಚೆರಿಯಪರಂಬು, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ನೆಲಜಿ, ಕಕ್ಕಬ್ಬೆ ಸೇರಿದಂತೆ ವಿಭಾಗದ ಅಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಿಸಿಲ ಬೇಗೆ ಹೆಚ್ಚಿದ್ದು, ಬಹುತೇಕ ತೋಟಗಳಲ್ಲಿ ಕಾಫಿಗಿಡ, ಕಾಳುಮೆಣಸು ಬಳ್ಳಿಗಳು ಬಿಸಿಲಿನ ತಾಪಕ್ಕೆ ಬಾಡಿ ಹೋಗಿದ್ದವು. ಪ್ರಸಕ್ತ ಸಾಲಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆಬಾರದೆ ಪರಿತಪಿಸುತ್ತಿದ್ದ ರೈತರಲ್ಲಿ ಮಳೆಯಿಂದ ಮಂದಹಾಸ ಮೂಡಿದೆ.
ನಾಪೋಕ್ಲು ವಿಭಾಗದಲ್ಲಿ ಮಳೆ ಇಲ್ಲದೆ ಕೃಷಿ ಚಟುವಟಿಕೆಗಳಿಗೆ ಮತ್ತು ಕುಡಿಯುವ ನೀರಿಗೂ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಪವಿತ್ರ ಕಾವೇರಿ ನದಿ ಸೇರಿದಂತೆ ವ್ಯಾಪ್ತಿಯ ಇನ್ನಿತರ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದೀಗ ಸಮಸ್ಯೆ ಸ್ವಲ್ಪಮಟ್ಟಿಗೆ ದೂರವಾದಂತಾಗಿದೆ.
ಒಂದು ಇಂಚು ಮಳೆಯಿಂದ ನಾಪೋಕ್ಲು ವಿಭಾಗದ ಜನರಲ್ಲಿ ಮುಂದೆ ಉತ್ತಮ ಮಳೆಯಾಗುವ ನಿರೀಕ್ಷೆ ಮೂಡಿದೆ.
ವರದಿ :ಝಕರಿಯ ನಾಪೋಕ್ಲು