ಮಡಿಕೇರಿ ಏ.25 : ಕೊಡಗು ಜಿಲ್ಲೆಯಲ್ಲಿ ಗ್ರಾಮೀಣ ಭಾರತ ಆರೋಗ್ಯ ಯೋಜನೆಯ ಆಸ್ಪತ್ರೆಯಲ್ಲಿ (ಆರ್‍ಐಹೆಚ್‍ಪಿ) ಅತ್ಯಾಧುನಿಕ ಸಿಟಿ ಸ್ಕ್ಯಾನ್ ಕೇಂದ್ರ ಸ್ಥಾಪಿಸಲು ಭಾರತದ ಪ್ರಮುಖ ವಿಶೇಷತೆಯ ಕಾಫಿ ಉತ್ಪಾದಿಸುವ ಟಾಟಾ ಕಾಫಿ ಲಿಮಿಟೆಡ್ ಹಣಕಾಸು ನೆರವು ನೀಡಿದೆ.
ಈ ‘ಆರ್‍ಐಹೆಚ್‍ಪಿ’ಯಲ್ಲಿ ರೋಗಿಗಳಿಗೆ ಗುಣಮಟ್ಟದ ಮತ್ತು ಉತ್ತಮವಾದ ವೈದ್ಯಕೀಯ ಸೇವೆ ಒದಗಿಸುವ ಗುರಿ ಹೊಂದಿದೆ. ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಮತ್ತು ಟಾಟಾ ಕಾಫಿ ಲಿಮಿಟೆಡ್ ಬೆಂಬಲಿತ ದಿ ಕೂರ್ಗ್ ಫೌಂಡೇಷನ್‍ನಿಂದ ಸೌಲಭ್ಯಗಳು ಮತ್ತು ಸೇವೆಗಳ ವಿಸ್ತರಣೆ ಸಾಧ್ಯವಾಗಿದೆ. ಅಮೆರಿಕ ಮೂಲದ ಲಾಭರಹಿತ ಸಂಸ್ಥೆ ‘ಕೊಡವ ಕೂಟ’ವು ಕೊಡಗು ಜಿಲ್ಲೆಯಲ್ಲಿ ಸಮುದಾಯ ಅಭಿವೃದ್ಧಿ ಯೋಜನೆಗಳಿಗೆ ಬೆಂಬಲ ನೀಡುತ್ತಿರುವ ಕೂರ್ಗ್ ಫೌಂಡೇಷನ್‍ಗೆ ನೀಡಿರುವ ಗಣನೀಯ ಮತ್ತು ಉದಾರ ಕೊಡುಗೆಯ ನೆರವಿನಿಂದಾಗಿ ಈ ಸಿಟಿ ಸ್ಕ್ಯಾನ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
1964ರಲ್ಲಿ ಸಾರ್ವಜನಿಕ ಟ್ರಸ್ಟ್ ಪ್ರಾರಂಭಿಸಿದ ಗ್ರಾಮೀಣ ಭಾರತ ಆರೋಗ್ಯ ಯೋಜನೆ ಆಸ್ಪತ್ರೆಯು 48 ಹಾಸಿಗೆಗಳ ಸೌಲಭ್ಯ ಹೊಂದಿದೆ. ಈ ಆಸ್ಪತ್ರೆಯು ಹಿಂದಿನ ವರ್ಷ ಸುಮಾರು 22,000 ರೋಗಿಗಳಿಗೆ ಚಿಕಿತ್ಸೆ ನೀಡಿದೆ. ದಿನದ 24 ಗಂಟೆಗಳ ಕಾಲ ವೈದ್ಯಕೀಯ, ತುರ್ತು ಕಾಳಜಿ, ರೋಗಿಗಳಿಗೆ ಆರೈಕೆ, ಶಸ್ತ್ರಚಿಕಿತ್ಸೆ ಮತ್ತು ಅಪಘಾತ ಸೇವೆಗಳನ್ನು ಒದಗಿಸುತ್ತಿದೆ. ಮುಖ್ಯ ವೈದ್ಯಾಧಿಕಾರಿ ಡಾ.ಚಂದ್ರು ಅವರ ನೇತೃತ್ವದಲ್ಲಿ, ಆಸ್ಪತ್ರೆಯಲ್ಲಿ ಡಿಜಿಟಲ್ ಎಕ್ಸ್-ರೇ, ಸಿ-ಆರ್ಮ್, ಇಸಿಜಿ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಡಯಾಲಿಸಿಸ್, ಎಂಡೊಸ್ಕೋಪಿ, ಎಕೊ-ಕಾರ್ಡಿಯೊಗ್ರಫಿ, ಡೆಂಟಲ್ ಯುನಿಟ್, ಫಿಸಿಯೊಥೆರಪಿ, ಸುಸಜ್ಜಿತ ಪ್ರಯೋಗಾಲಯ ಸೇವೆಗಳು, ಆಂಬುಲೆನ್ಸ್ ಹಾಗೂ ಕ್ಯಾಂಟೀನ್ ಸೌಲಭ್ಯಗಳಿವೆ.
ಹೊಸದಾಗಿ ಪ್ರಾರಂಭಿಸಲಾದ ಸಿಟಿ ಸ್ಕ್ಯಾನ್ ಸೌಲಭ್ಯವು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಬಹಳ ಉಪಯುಕ್ತವಾಗಿರುವ ಮೌಲ್ಯಯುತವಾದ ರೋಗ ನಿರ್ಣಯ ವ್ಯವಸ್ಥೆಗೆ ಹೊಸ ಸೇರ್ಪಡೆಯಾಗಿದೆ. ಮಧ್ಯಸ್ಥಿಕೆ ಮತ್ತು ಚಿಕಿತ್ಸಕ ಕಾರ್ಯವಿಧಾನಗಳನ್ನು ಯೋಜಿಸಲು ಮತ್ತು ಮಾರ್ಗದರ್ಶನ ಮಾಡುವುದಕ್ಕೂ ಇದು ಸಹಾಯ ಮಾಡಲಿದೆ ಎಂದು ಟಾಟಾ ಕಾಫಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಚಾಕೊ ಥಾಮಸ್ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು.