ಸೋಮವಾರಪೇಟೆ ಏ.26 : ಸೋಮವಾರಪೇಟೆ ಪಟ್ಟಣದಲ್ಲಿ ವರ್ಷದ ಮೊದಲ ಮಳೆ ತಂಪೆರೆದಿದೆ. ಬಿಸಿಲ ತಾಪದಿಂದ ಪರದಾಡುತ್ತಿದ್ದ ಜನರಿಗೆ ಸಾಧಾರಣ ಮಳೆ ನೆಮ್ಮದಿ ತಂದಿದೆ.
ಗ್ರಾಮೀಣ ಭಾಗದಲ್ಲಿ ಬಹುತೇಕ ಕಡೆ ಹತ್ತಿಪ್ಪತ್ತು ಸೆಂಟ್ಸ್ನಷ್ಟು ಮಳೆಯಾಗಿದ್ದು, ಕಾಫಿ ಬೆಳೆಗಾರರು ಆತಂಕಗೊಂಡಿದ್ದಾರೆ. ವಿಳಂಬವಾಗಿದ್ದರೂ ಒಂದು ಇಂಚಿನಷ್ಟು ಮೊದಲ ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಅನೇಕರು ದೇವರಿಗೆ ಹರಕೆ ಹೊತ್ತಿದ್ದರು. ಶಾಂತಳ್ಳಿ ಹೋಬಳಿಯ ಕೂತಿ, ಹರಪಳ್ಳಿ, ಶನಿವಾರಸಂತೆ ಭಾಗದ ಕೆಲ ಭಾಗದಲ್ಲಿ ಒಂದು ಇಂಚಿನಷ್ಟು ಮಳೆ ಸುರಿದಿರುವುದು ಬಿಟ್ಟರೆ, ಉಳಿದ ಭಾಗದಲ್ಲಿ ಕಡಿಮೆ ಮಳೆ ಸುರಿದಿದೆ. ಹತ್ತಿಪ್ಪತ್ತು ಸೆಂಟ್ ನಷ್ಟು ಮಳೆಬಿದ್ದ ಕಡೆ ಅರ್ಧಂಬರ್ಧ ಹೂ ಅರಳಿ ಭಾರೀ ಪ್ರಮಾಣದಲ್ಲಿ ಫಸಲು ನಷ್ಟವಾಗುತ್ತದೆ ಎಂದು ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.










