ಮಡಿಕೇರಿ ಏ.26 : ಅಖಿಲ ಭಾರತ ಹಿಂದೂ ಮಹಾಸಭಾದ ಬೆಂಬಲಿತ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಕೆ.ಶ್ರೀನಿವಾಸ ರೈ ಅವರನ್ನು ಬೆಂಬಲಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಗೌಡ್ರು ಮತದಾರರಲ್ಲಿ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ರಾಜ್ಯ ವಿವಿಧೆಡೆಗಳಲ್ಲಿ ಅಬ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಹಿಂದೆ ನಮ್ಮ ಪಕ್ಷದಿಂದ ರಾಣೆಬೆನ್ನೂರು ಕ್ಷೇತ್ರದಿಂದ ಆರ್.ಶಂಕರ್ ಅವರು ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದರು ಎಂದರು.
ಭ್ರಷ್ಟ ವ್ಯವಸ್ಥೆಯ ನಡುವೆ ಅತ್ಯಂತ ಪ್ರ್ರಾಮಾಣಿಕವಾದ, ಜನ ಸ್ಪಂದನೆಯ ಸ್ವಚ್ಛ ಆಡಳಿತವನ್ನು ನೀಡಬೇಕೆನ್ನುವ ಚಿಂತನೆ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ್ದಾಗಿದೆ. ಕ್ಷೇತ್ರದ ಪ್ರಜ್ಞಾವಂತ ಮತದಾರರು ಶ್ರೀನಿವಾಸ ರೈ ಅವರ ‘ಟಿವಿ’ ಚಿಹ್ನೆಗೆ ಮತ ಹಾಕುವ ಮೂಲಕ ಬೆಂಬಲ ನೀಡುವಂತೆ ಕೋರಿದರು.
ಪಕ್ಷದ ಅಭ್ಯರ್ಥಿ ಶ್ರೀನಿವಾಸ ರೈ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ ಸಂದರ್ಭ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇನೆ. ಪ್ರಸ್ತುತ ಆಡಳಿತ ವಿರೋಧಿ ಅಲೆ ಕಂಡು ಬರುತ್ತಿದ್ದು, ಈ ಸಂದರ್ಭ ತನ್ನನ್ನು ಕ್ಷೇತ್ರದ ಜನತೆ ಆಶೀರ್ವದಿಸುವ ಮೂಲಕ ಜನಸೇವೆಗೆ ಒಂದು ಅವಕಾಶವನ್ನು ನಿಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ರಾಷ್ಡ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.









